ಉಡುಪಿ ಪೊಲೀಸರ ಮಹತ್ವದ ಕಾರ್ಯಾಚರಣೆ: ಕೃಷ್ಣ ಮಠದ ಬಳಿ ಹೊಂಚುಹಾಕುತ್ತಿದ್ದ ‘ಇರಾನಿ ಗ್ಯಾಂಗ್’ ಪೊಲೀಸ್ ಬಲೆಗೆ

ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ದೇವಜ್ಯೋತಿ ರೇ ಐ.ಪಿ.ಎಸ್. ಅವರಿಂದ ಉಡುಪಿ ಪೊಲೀಸರ ಪ್ರಶಂಶೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ನಿರ್ದೇಶನದಲ್ಲಿ ನಡೆದ ಮಹತ್ವದ ಪೊಲೀಸ್ ಕಾರ್ಯಾಚರಣೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ನಿರ್ದೇಶನದಲ್ಲಿ ನಡೆದ ಮಹತ್ವದ ಪೊಲೀಸ್ ಕಾರ್ಯಾಚರಣೆಯಲ್ಲಿ ಕುಖ್ಯಾತ ಇರಾನಿ ಗ್ಯಾಂಗ್ ಸದಸ್ಯರಾದ ನಾಲ್ವರು ಅಂತಾರಾಜ್ಯ ಸರಗಳ್ಳರನ್ನು ಬಂಧಿಸಲಾಗಿದೆ. ಇರಾನಿ ಗ್ಯಾಂಗ್‍ ಖದೀಮರು ಬಹಳಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅವರನ್ನು ವಶಕ್ಕೆ ಪಡೆದಿರುವುದರಿಂದ ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ  ದೇವಜ್ಯೋತಿ ರೇ  ಐ.ಪಿ.ಎಸ್. ಅವರು ಈ ಕಾರ್ಯಾಚರಣೆಯನ್ನು ಪ್ರಶಂಶಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ಶ್ರೀರಾಂಪುರದ ಝಾಕಿರ್ ಹುಸೇನ್, ಕಂಬರ್ ರಹೀಮ್ ಮಿರ್ಜಾ, ಅಕ್ಷಯ್ ಸಂಜಯ್ ಗೋಸಾವಿ, ಶಾರುಖ್ ಬಂದೇನವಾಝ್ ಎಂದು ಗುರುತಿಸಲಾಗಿದೆ.

ಕುಂದಾಪುರ, ವಿಜಯಪುರ, ಚಿಕ್ಕಮಗಳೂರು, ಮಂಗಳೂರು, ಬಂಟ್ವಾಳ ಸೇರಿದಂತೆ ಹಲವೆಡೆ ಇವರ ವಿರುದ್ಧ ಪ್ರಕರಣಗಳು ದಾಖಲಾಗಿರುವುದು ತನಿಖೆ ಸಂದರ್ಭ ಬೆಳಕಿಗೆ ಬಂದಿದೆ.

‘ನಾವು ಪೊಲೀಸ್’ ಎಂದು ವಂಚಿಸಿ ಚಿನ್ನಾಭರಣ ಅಪಹರಣ

ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು ಅಥವಾ ಗಂಡಸರು ನಡೆದುಕೊಂಡು ಹೋಗುವಾಗ ಅವರಿಗೆ ನಾವು ಪೊಲೀಸರು, ಮುಂದೆ ಗಲಾಟೆ ಆಗಿದೆ, ಚಿನ್ನಾಭರಣ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿ ಕೊಡುವುದಾಗಿ ನಂಬಿಸಿ, ಅವರಿಗೆ ತಿಳಿಯದಂತೆ ಚಿನ್ನಾಭರಣವನ್ನು ಮೋಸದಿಂದ ಅಪಹರಿಸಿ ಪರಾರಿಯಾಗುತ್ತಿದ್ದರು.

ಕಾರು ಹಾಗೂ ಬೈಕಿನಲ್ಲಿ ಪ್ರತ್ಯೇಕವಾಗಿ ಬಂದು ಕಾರನ್ನು ಬೇರೆ ಕಡೆ ನಿಲ್ಲಿಸಿ, ಬೈಕ್‍ನಲ್ಲಿ ಕೃತ್ಯವೆಸಗಿ ಕಾರಿನಲ್ಲಿ ಕೃತ್ಯದ ವೇಳೆ ಧರಿಸಿದ್ದ ಬಟ್ಟೆ ಬದಲಾಗಿಸಿ ಬಳಿಕ ಕಾರಿನಲ್ಲಿ ಪರಾರಿಯಾಗುವುದು ಮತ್ತು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‍ ಕಾರಿನಲ್ಲಿದ್ದವರು ಓಡಿಸಿಕೊಂಡು ಹೋಗಿ ಕೃತ್ಯದ ಸುಳಿವು ಸಿಗದಂತೆ ಮಾಡುತ್ತಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಕುಮಾರ ಚಂದ್ರ, ಕುಂದಾಪುರ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾದ ಹರೆರಾಮ್ ಶಂಕರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ  ಟಿ.ಆರ್.ಜೈಶಂಕರ್ ರ್ಮಾರ್ಗದರ್ಶನದಲ್ಲಿ, ಉಡುಪಿ ಡಿಸಿಐಬಿ ಪೊಲೀಸ್ ಇನ್ಸಪೆಕ್ಟರ್ ಮಂಜಪ್ಪ ಡಿ.ಆರ್. ಖಚಿತ ಮಾಹಿತಿ ಮೇರೆಗೆ ಇರಾನಿ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದ ಬಳಿ ಹೊಂಚುಹಾಕುತ್ತಿದ್ದ ಅಂತರರಾಜ್ಯ ವಂಚನೆಗಾರರಾದ ಇರಾನಿ ಗ್ಯಾಂಗ್‍ ಸದಸ್ಯರನ್ನು ದಸ್ತಗಿರಿ ಮಾಡಿದ್ದಾರೆ.

ತನಿಖೆ ವೇಳೆ ಇವರ ವಿರುದ್ಧ ಉಡುಪಿ ನಗರ -1, ಕುಂದಾಪುರ -1, ವಿಜಯಪುರದಲ್ಲಿ 4, ಚಿಕ್ಕಮಗಳೂರುನಲ್ಲಿ 1, ಬಂಟ್ವಾಳ-1, ಮಂಗಳೂರು ಉರ್ವಾ-1 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿರುತ್ತದೆ. ಇನ್ನೂ ಹಲವಾರು ಕಡೆಗಳಲ್ಲಿ ಇದೇ ರೀತಿ ಕೃತ್ಯಗಳನ್ನು ನಡೆಸಿರುತ್ತಾರೆ.

ಆರೋಪಿಗಳನ್ನು ದಸ್ತಗಿರಿ ಮಾಡಿದ ವೇಳೆ ಮಂಗಳೂರಿನಲ್ಲಿ ನಡೆಸಿದ ಕೃತ್ಯದ 12 ಗ್ರಾಂ ತೂಕದ ಚಿನ್ನದ ಚೈನ್ , ಚಾವರ್‍ಲೆಟ್ ಬೀಟ್ ಕಾರು ಮತ್ತು ಹೊಂಡಾ ಶೈನ್ ಬೈಕ್  ಮತ್ತು ನಗದು 5,100/- ರೂಪಾಯಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ಶ್ರೀರಾಮ್‍ಪುರದಲ್ಲಿನ ಚಿನ್ನದ ಅಂಗಡಿಯಿಂದ 65 ಗ್ರಾಂ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ವಿಷ್ಣುವರ್ಧನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರನ್ನು ಇನ್ನೂ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲು ಈ ಸಂದರ್ಭ ಹುರಿದುಂಬಿದ್ದಾರೆ.

ಆರೋಪಿಗಳ ಪತ್ತೆಯ ಬಗ್ಗೆ ಡಿ.ಸಿ.ಐ.ಬಿ ಘಟಕದ ಎಎಸ್‍ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸಂತೋಷ ಕುಂದರ್, ಸುರೇಶ, ರಾಘವೇಂದ್ರ ಉಪ್ಪುಂದ, ರಾಜ್‍ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ ಹಾಗೂ ಚಾಲಕ ರಾಘವೇಂದ್ರ ರವರು ಸಹಕರಿಸಿದ್ದರು.

ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಉಡುಪಿ ನಗರ ಠಾಣೆಯ ಪಿಎಸ್‍ಐ ಸಕ್ತಿವೇಲು, ಕುಂದಾಪುರ ಠಾಣೆಯ ಪಿಎಸ್‍ಐ ಸದಾಶಿವ ಗವರೋಜಿ ಹಾಗೂ ಉಡುಪಿ ನಗರ ಠಾಣೆಯ ಸಿಬ್ಬಂದಿಯವರಾದ ರಿಯಾಜ್ ಹಾಗೂ ಲೋಕೇಶ್, ಕುಂದಾಪುರ ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ. ಸುಧಾಕರ, ಸಂತೋಷ ಹಾಗೂ ಮಂಜುನಾಥ ಅವರು ಸಹಕರಿಸಿದ್ದಾರೆ.

Get real time updates directly on you device, subscribe now.