ಕುಂದಾಪುರ: ಎ.ಎಸ್.ಎನ್ ಹೆಬ್ಬಾರರ 12 ಪುಸ್ತಕಗಳು ರಾಜ್ಯೋತ್ಸವದಂದು ಲೋಕಾರ್ಪಣೆ

'ಈ ನೆಲದ ಒಂದು ಐತಿಹಾಸಿಕ ವಿದ್ಯಮಾನಕ್ಕೆ ಸಾಕ್ಷಿಯಾಗೋಣ, ಬನ್ನಿ' ಎಂದು ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕೋರಿದ್ದಾರೆ.

‘ಕಲಾಕ್ಷೇತ್ರ-ಕುಂದಾಪುರ’ ಭಾನುವಾರ ನವೆಂಬರ್ 1ರ ಸಂಜೆ 5.30 ಕ್ಕೆ ‘ಕಲಾಮಂದಿರ’ದಲ್ಲಿ ವಿನೂತನ ರಾಜ್ಯೋತ್ಸವ ಕಾರ್ಯಕ್ರಮವಾಗಿ ಆಯೋಜಿಸಿದೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಹಿರಿಯ ನ್ಯಾಯವಾದಿ, ಪತ್ರಕರ್ತ, ಲೇಖಕ ಎ.ಎಸ್.ಎನ್. ಹೆಬ್ಬಾರ್ ಅವರ ಕಥೆ, ಕವನ, ಹಾಸ್ಯಲೇಖನಗಳು, ಪ್ರವಾಸ ಕಥನ, ಅಂಕಣ ಬರಹಗಳು, ಆಕಾಶವಾಣಿಯ ಚಿಂತನಗಳು ಸೇರಿದಂತೆ 12 ಪುಸ್ತಕಗಳು ಹೆಬ್ಬಾರರಿಗೆ 80 ತುಂಬುವ ಹಿಂದಿನ ದಿನ ಅನಾವರಣಗೊಳ್ಳಲಿವೆ ಎಂದು ‘ಕಲಾಕ್ಷೇತ್ರ’ ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಸಭೆ, ಸಮಾರಂಭ, ಸಮ್ಮೇಳನ, ಭಾಷಣ ಎಂದು ತಿರುಗಾಟದಲ್ಲೇ ಇರುತ್ತಿದ್ದ, ತನ್ನ ಬರಹಗಳನ್ನು ಪುಸ್ತಕವಾಗಿಸಲು ಪುರುಸೊತ್ತೇ ಇಲ್ಲವೆನ್ನುತ್ತಿದ್ದ ಎ.ಎಸ್.ಎನ್. ಹೆಬ್ಬಾರರು ಕೊರೊನಾ ಲಾಕ್ಡೌನ್ ಸದವಕಾಶವಾಗಿ ಬಳಸಿಕೊಂಡಿದ್ದಾರೆ. ಮನೆಯಲ್ಲೇ ಕುಳಿತು ಕೊಳ್ಳುವ ಹಾಗಾಗಿದ್ದನ್ನು ಬಳಸಿಕೊಂಡ ಹೆಬ್ಬಾರರು ತಮ್ಮ ಬರಹಗಳ ಕಡತ ಹೊರತೆಗೆದು ಪುಸ್ತಕಕ್ಕಿಳಿಸಿದ್ದಾರೆ.

ಭಾನುವಾರ ನವೆಂಬರ್ 1 ರ ಸಂಜೆ 5.30 ಕ್ಕೆ ಕುಂದಾಪುರದ ಕಲಾಮಂದಿರದಲ್ಲಿ ವಿನೂತನ ರಾಜ್ಯೋತ್ಸವ ಕಾರ್ಯಕ್ರಮವಾಗಿ ಕುಂದಾಪುರದ ಕಲಾಕ್ಷೇತ್ರ-ಕುಂದಾಪುರ ಈ ಅಪೂರ್ವ ಸಮಾರಂಭವನ್ನು ಸರಳವಾಗಿ ಕೊರೊನಾ ಕಟ್ಟುಪಾಡಿನ ಚೌಕಟ್ಟಿನಲ್ಲಿ ನಡೆಸಲು ಸಜ್ಜಾಗಿದೆ.

ಸಮಾರಂಭದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ

ಸಮಾರಂಭದ ಅಧ್ಯಕ್ಷತೆಯನ್ನು ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವಾ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾಹಿತಿ ಮತ್ತು ಮಾಜಿ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಮಾವಿನಕುಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ.

ಸಾಹಿತ್ಯಾಸಕ್ತರು ಕನ್ನಡ ಪ್ರೇಮಿಗಳು ಈ ಸಮಾರಂಭದಲ್ಲಿ ಭಾಗವಹಿಸಿ ‘ಈ ನೆಲದ ಒಂದು ಐತಿಹಾಸಿಕ ವಿದ್ಯಮಾನಕ್ಕೆ ಸಾಕ್ಷಿಯಾಗೋಣ, ಬನ್ನಿ’ ಎಂದು ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕೋರಿದ್ದಾರೆ.

 

 

Get real time updates directly on you device, subscribe now.