ಸುಳ್ಯ: ದೇವರಗುಂಡಿ ಫಾಲ್ಸ್‌ನಲ್ಲಿ ಬಿಕಿನಿ ಫೋಟೊಶೂಟ್‌ಗೆ ಸಾರ್ವಜನಿಕ ಆಕ್ರೋಶ

'ಇದು ಪವಿತ್ರ ಸ್ಥಳವೆಂದು ಗೊತ್ತಿರಲಿಲ್ಲ. ಗೊತ್ತಿಲ್ಲದೆ ತಪ್ಪಾಗಿದೆ.'

ಜಲಪಾತದ ಸಮೀಪ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದ ಎಂಬ ಧಾರ್ಮಿಕ ಭಾವನೆಗೆ ನೋವಾದ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹ.

ಕರಾವಳಿ ಕರ್ನಾಟಕ ವರದಿ
ಸುಳ್ಯ: ತಾಲೂಕಿನ ದೇವರಗುಡಿ ಜಲಪಾತದಲ್ಲಿ ಬೆಂಗಳೂರಿನ ರೂಪದರ್ಶಿಗಳು ಬಿಕಿನಿ ಫೋಟೋಶೂಟ್ ನಡೆಸಿ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂಬ ಆಕ್ರೋಶದ ಹಿನ್ನೆಲೆಯಲ್ಲಿ ಮಾಡೆಲ್ ಬೃಂದಾ ಅರಸ್ ಕ್ಷಮೆ ಯಾಚಿಸಿದ್ದಾರೆ.

ಇದು ಪವಿತ್ರ ಸ್ಥಳವೆಂದು ಗೊತ್ತಿರಲಿಲ್ಲ. ಗೊತ್ತಿಲ್ಲದೆ ತಪ್ಪಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೃಂದಾ ಹೇಳಿದ್ದಾರೆ.

ತೋಡಿಕಾನ ದೇವರಗುಡಿ ಜಲಪಾತದ ಸಮೀಪ ಪ್ರಾಚೀನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಇಲ್ಲಿ ಬಿಕಿನಿ ಧರಿಸಿ ಫೋಟೋಶೂಟ್ ನಡೆಸಲಾಗಿರುವ ಸಂಗತಿ ಸ್ಥಳೀಯರನ್ನು ಕೆರಳಿಸಿತ್ತು.

ವಾರದ ಹಿಂದೆ ಬೆಂಗಳೂರಿನಿಂದ ಬಂದಿದ್ದ ತಂಡ ಜಲಪಾತದ ಬಳಿ ಫೋಟೋಶೂಟ್ ನಡೆಸಿ ಇನ್ಸ್ಟಾಗ್ರಾಂ ಗೆ ಅಪ್ಲೋಡ್ ಮಾಡಿದ ವಿಡೀಯೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದವು.

ಮಾಡೆಲ್ ಬೃಂದಾ ಅರಸ್ ಹಾಗೂ ಇನ್ನೋರ್ವ ನಟಿಯ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರು ದೇವಸ್ಥಾನ ಆಡಳಿತ ಮಂಡಳಿಗೆ ದೂರು ನೀಡಿದ್ದರು.

ಜಲಪಾತದ ಸಮೀಪ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದ ಎಂಬ ನಂಬಿಕೆ ಜನರಲ್ಲಿದ್ದು, ಅವರ ಧಾರ್ಮಿಕ ಭಾವನೆಗೆ ನೋವಾದ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿದ್ದರು.

Get real time updates directly on you device, subscribe now.