ಮುಂಬೈ ಪೊಲೀಸರಿಂದ ಅರ್ನಾಬ್ ಗೋಸ್ವಾಮಿ ಬಂಧನ
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಸಿಐಡಿ ತಂಡ ಬಂಧಿಸಿದೆ.
ಅರ್ನಾಬ್ ಗೋಸ್ವಾಮಿ ತಮಗೆ ಪಾವತಿಸಬೇಕಾಗಿದ್ದ ಹಣ ನೀಡದ ಕಾರಣ ಆರ್ಥಿಕ ತೊಂದರೆಗೆ ಒಳಗಾದೆವು ಎಂದು ಅನ್ವಯ ನಾಯಕ್ ಡೆತ್ನೋಟ್ ಬರೆದಿದ್ದರು.
ಕರಾವಳಿ ಕರ್ನಾಟಕ ವರದಿ
ಮುಂಬೈ: ಮಹಾರಾಷ್ಟ್ರದ ಅಲಿಬಾಗ್ ನಿವಾಸಿ, ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಮುಂಬೈ ಸಿಐಡಿ ತಂಡ ಬಂಧಿಸಿದೆ.
ಅಲಿಬಾಗ್ ನಿವಾಸಿ ಅನ್ವಯ್ ನಾಯಕ್(53) ಮತ್ತು ತಾಯಿ ಕುಮುದಾ ನಾಯಕ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. 2018ರಲ್ಲಿ ಘಟನೆ ನಡೆದಿದ್ದು, ಡೆತ್ನೋಟ್ನಲ್ಲಿ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರು 5.40ಕೋಟಿ ರೂ. ಬಾಕಿ ಪಾವತಿ ಮಾಡದ ಕಾರಣ ಆರ್ಥಿಕ ತೊಂದರೆಗೆ ಒಳಗಾದೆವು ಎಂದು ಅನ್ವಯ ನಾಯಕ್ ಬರೆದಿದ್ದರು.
ಅರ್ನಬ್, ಫಿರೋಝ್ ಶೇಖ್ ಮತ್ತು ನಿತೇಶ್ ಸರ್ದಾ ಎಂಬವರು ಬಾಕಿ ಪಾವತಿಸದ ಕಾರಣ ಕುಟುಂಬ ತೀವೃ ಆರ್ಥಿಕ ತೊಂದರೆಗೆ ಸಿಲುಕಿದೆ. ಆಲಿಭಾಗ್ ಪೊಲೀಸರು ಅರ್ನಾಬ್ ತಮಗೆ ವಂಚಿಸಿದ ಬಗ್ಗೆ ನೀಡಲಾದ ದೂರಿನ ತನಿಖೆ ನಡೆಸಿಲ್ಲ ಎಂದು ಡೆತ್ನೋಟ್ನಲ್ಲಿ ಆತ್ಮಹತ್ಯೆಗೆ ಕಾರಣ ಬರೆದಿದ್ದರು. ಈ ಬಗ್ಗೆ ಅಲಿಬಾಗ್ ಪೊಲೀಸರು ಪ್ರಕರಣ ದಾಖಲಿಸಿದ್ದು, 2019ರಲ್ಲಿ ಅಲಿಭಾಗ್ ಪೊಲೀಸರು ಪ್ರಕರಣದ ತನಿಖೆ ನಿಲ್ಲಿಸಿದ್ದರು. ಈ ಬಗ್ಗೆ ಅನ್ವಯ್ ನಾಯಕ್ ಅವರ ಪುತ್ರಿ ಆಡ್ನ್ಯಾ ನಾಯಕ್ ಅವರು ಮಹಾರಾಷ್ಟ್ರ ಗೃಹ ಸಚಿವರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ 2020ರ ಮೇ ತಿಂಗಳಲ್ಲಿ ಸರಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು. ಅನ್ವಯ್ ನಾಯಕ್ ಅವರ ಪತ್ನಿ ಅಕ್ಷತಾ ಅವರು ತಮ್ಮ ಪತಿಯ ಡೆತ್ ನೋಟ್ನಲ್ಲಿ ಅರ್ನಬ್ ಹಣ ನೀಡದೇ ವಂಚಿಸದಿರುವುದನ್ನು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿ ನ್ಯಾಯ ನೀಡಬೇಕೆಂದು ದೂರು ಸಲ್ಲಿಸಿದ್ದರು.
ಮುಂಬೈ ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವ ಸಂದರ್ಭ ಹಲ್ಲೆಗೈದಿದ್ದಾರೆ ಎಂದು ಅರ್ನಬ್ ಗೋಸ್ವಾಮಿ ಆರೋಪಿಸಿದ್ದಾರೆ.
ಗೋಸ್ವಾಮಿ ವಿರುದ್ಧ ಟಿಆರ್ಪಿ ತಿರುಚಿದ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗ ಈ ಬೆಳವಣಿಗೆ ನಡೆದಿರುವುದು ಗಮನ ಸೆಳೆದಿದೆ.