ಕುಂದಾಪುರ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಆರೋಪಿಗಳು ಪೊಲೀಸ್ ಬಲೆಗೆ

ಬೀಜಾಡಿ ನಿವಾಸಿ ಜಯರಾಜ್ ಶೆಟ್ಟಿ ವಂಡ್ಸೆಯವರ ಮನೆ ಬೀಗ ಮುರಿದು 9,88,500ರೂ. ಮೌಲ್ಯದ ಚಿನ್ನ ಹಾಗೂ  ಬೆಳ್ಳಿಯ ಆಭರಣಗಳ ಕಳ್ಳತನ

ಪೊಲೀಸ್ ತಂಡ ನಿಜಕ್ಕೂ ಕಠಿಣ ಪರಿಶ್ರಮದಿಂದ ಆರೋಪಿಗಳನ್ನು ಬಂಧಿಸಿದ್ದು, ಅಧಿಕಾರಿಗಳ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಜಯರಾಜ್ ಶೆಟ್ಟಿ ತಿಳಿಸಿದ್ದಾರೆ.             

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಬೀಜಾಡಿ ನಿವಾಸಿ ಜಯರಾಜ್ ಶೆಟ್ಟಿ ವಂಡ್ಸೆಯವರ ಮನೆ ಬೀಗ ಮುರಿದು ಕಳ್ಳತನಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಕುಂದಾಪುರ ಪಿಎಸ್ಸೈ ಸದಾಶಿವ ಗವರೋಜಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಆರೋಪಿಗಳನ್ನು ಧಾರವಾಡ ನಿವಾಸಿಗಳಾದ ರಾಜೇಶ್ ನಾಯ್ಕ ಮತ್ತು ಆತನ ಪತ್ನಿ ಪದ್ಮಾ  ಪಾಮಡಿ ಎಂದು ಗುರುತಿಸಲಾಗಿದೆ.

ಆರೋಪಿ ಧಾರಾವಾಡ  ಜುವೆಲ್ಲರಿ  ಅಂಗಡಿಗಳಲ್ಲಿ ಮಾರಾಟ  ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು  ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೀಜಾಡಿ ಗ್ರಾಮದ  ಬೀಪಾನ್ಬೆಟ್ಟು  ರಸ್ತೆಯಲ್ಲಿರುವ  ಜಯರಾಜ್ ಶೆಟ್ಟಿಯವರು ಪತ್ನಿಯ ತಂದೆಯ ಅಂತ್ಯ ಸಂಸ್ಕಾರದಲ್ಲಿ  ಪಾಲ್ಗೊಳ್ಳಲು ಮನೆಗೆ  ಬೀಗ  ಹಾಕಿ  ಹೋಗಿದ್ದ ಸಮಯದಲ್ಲಿ ರಾತ್ರಿ  ಮನೆಯ ಬೀಗ ಮುರಿಯಲಾಗಿತ್ತು. ಮನೆಯೊಳಗೆ ಇರಿಸಿದ್ದ  ಸುಮಾರು 9,88,500ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು  ಕಳ್ಳತನವಾದ ಬಗ್ಗೆ  ಜಯರಾಜ್ ಶೆಟ್ಟಿಯವರು ನೀಡಿರುವ ದೂರಿನಂತೆ ಕುಂದಾಪುರ  ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ರಾಜೇಶ್ ಯಾನೆ ರಾಜ ಉಡುಪಿ ಇಂದ್ರಾಳಿಯವನಾಗಿದ್ದು ಈತನ ಹೆಂಡತಿ ಧಾರವಾಡ ನಿವಾಸಿಯಾಗಿದ್ದರಿಂದ ಈತ ಅಲ್ಲೇ ನೆಲೆಸಿದ್ದ.  ಈ ಮೊದಲು ಕಾಪು   ಮಣಿಪಾಲ ಠಾಣಾ  ವ್ಯಾಪ್ತಿಯಲ್ಲಿ   ಕಳ್ಳತನ  ನಡೆಸಿ  ಜೈಲಿನಲ್ಲಿದ್ದ.  ಜುಲೈ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದ ಬಳಿಕ ಹೆಂಡತಿಯೊಂದಿಗೆ  ಸೇರಿಕೊಂಡು ಕುಂದಾಪುರ, ಸುರತ್ಕಲ್, ಮುಲ್ಕಿ, ಮಣಿಪಾಲ,  ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ, ಕಾರವಾರಗಳಲ್ಲಿ ಮನೆ ಹಾಗೂ  ದೇವಸ್ಥಾನಗಳಲ್ಲಿ ಮತ್ತು ದೈವಸ್ಥಾನದಲ್ಲಿ ಕಳವು ಮಾಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಅವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ಕುಂದಾಫುರ  ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ನಡೆಸಿದ ಕಾರ್ಯಾಚರಣೆಯಲ್ಲಿ ಕುಂದಾಪುರ ಠಾಣಾ ಪಿ.ಎಸ್.ಐ. ಸದಾಶಿವ  ಗವರೋಜಿ. ಕುಂದಾಪುರ ಸಂಚಾರ ಠಾಣಾ ಪಿ.ಎಸ್.ಐ. ಸುದರ್ಶನ್, ಶಂಕರನಾರಾಯಣ ಪಿ.ಎಸ್.ಐ. ಶ್ರೀಧರ ನಾಯ್ಕ ಹಾಗೂ ಸಿಬ್ಬಂದಿ ಮಂಜುನಾಥ,  ಸಂತೋಷ, ರಾಘವೇಂದ್ರ, ಸಿದ್ದಪ್ಪ ವೃತ್ತ ಕಚೇರಿಯ ಸಿಬ್ಬಂದಿ ಸೀತಾರಾಮ, ವಿಕ್ಟರ್ ,  ಗುರುರಾಜ್, ಉದಯ, ಮಹಿಳಾ ಸಿಬ್ಬಂದಿ ಬೇಬಿ, ಚಂದ್ರಾವತಿ, ಅಶ್ರೀತಾ ಮತ್ತು ಚಾಲಕರಾದ ಸಂತೋಷ ಪಾಲ್ಗೊಂಡಿದ್ದರು.

ಪೊಲೀಸ್ ಅಧಿಕಾರಿಗಳ ಬಗ್ಗೆ ಹೆಮ್ಮೆ ಎನಿಸುತ್ತದೆ: ಮನೆಮಾಲಕ ಜಯರಾಜ್ ಶೆಟ್ಟಿ

ಜಯರಾಜ್ ಶೆಟ್ಟಿ

ಮನೆಗಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ ಕುಂದಾಪುರ ಪಿಎಸ್ಸೈ ಸದಾಶಿವ ಗವರೋಜಿ ನೇತೃತ್ವದ ಪೊಲೀಸ್ ತಂಡವನ್ನು ಜಯರಾಜ್ ಶೆಟ್ಟಿ ವಂಡ್ಸೆ ಅಭಿನಂದಿಸಿದ್ದಾರೆ. ಪಿಎಸ್ಸೈ ಸದಾಶಿವ ಗವರೋಜಿ ಮತ್ತು ಪೊಲೀಸ್ ತಂಡ ನಿಜಕ್ಕೂ ಕಠಿಣ ಪರಿಶ್ರಮದಿಂದ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದು, ಇಂಥ ಅಧಿಕಾರಿಗಳ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಜಯರಾಜ್ ಶೆಟ್ಟಿ ತಿಳಿಸಿದ್ದಾರೆ.

 

Get real time updates directly on you device, subscribe now.