‘ರವಿ ಬೆಳಗೆರೆ ಆರೋಗ್ಯದ ಬಗ್ಗೆ ಗಮನ ಹರಿಸಿದ್ದರೆ ಕರ್ನಾಟಕಕ್ಕೆ ಇನ್ನೊಬ್ಬ ಖುಷ್ವಂತ್ ಸಿಂಗ್ ಸಿಗುತ್ತಿದ್ದರೇನೋ.’

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತ ರವಿ ಬೆಳಗೆರೆಯವರಿಗೆ ಶೃದ್ಢಾಂಜಲಿ.

ಕರ್ನಾಟಕದ ಒಂದು ತಲೆಮಾರಿನ ಬಹುತೇಕ ಪತ್ರಕರ್ತರನ್ನು, ಬರಹಗಾರರನ್ನು ಒಂದಲ್ಲ ಒಂದು ರೀತಿ ಬೆಳಗೆರೆ ಪ್ರಭಾವಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ರವಿ ಬೆಳಗೆರೆಯವರನ್ನು ಪತ್ರಿಕೋದ್ಯಮವೋ, ಸಾಹಿತ್ಯ ರಂಗದಿಂದಲೋ ಕಡೆಗಣಿಸಲು ಸಾಧ್ಯವಿಲ್ಲ ಎಂಬ ಮಟ್ಟದಲ್ಲಿ ಅವರು ಬರವಣಿಗೆ ನೀಡಿದ್ದಾರೆ. ರವಿ ಬೆಳಗೆರೆ ಪತ್ರಕರ್ತರಾಗಿರದೇ ಇದ್ದರೆ ಸಾಮಾನ್ಯ ಜನರಿಗೆ ಅವರ ಪ್ರತಿಭೆ ಏನು ಎಂಬುದು ಅರಿವಾಗುತ್ತಿರಲಿಲ್ಲ. ಆದರೆ ಪತ್ರಕರ್ತರಾಗಿರದೇ ಇದ್ದರೆ ಕನ್ನಡಕ್ಕೆ ಇನ್ನೂ ದೊಡ್ಡ ಸಾಹಿತ್ಯದ ಕೊಡುಗೆ ಕೊಡುತ್ತಿದ್ದರು ಅನಿಸುತ್ತದೆ. ರವಿ ಬೆಳಗೆರೆಯವರ ಧನಾತ್ಮಕ ವಿಚಾರಗಳು, ಅವರ ಬರಹಗಳು, ಅವರ ಮಾತುಗಳು, ಅವರ ನೆನಪುಗಳು ನಮ್ಮೊಂದಿಗೆ ಸದಾ ಇರುತ್ತವೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹೇಳಿದರು.

ರವಿ ಬೆಳಗೆರೆ ಖುಷ್ವಂತ್ ಸಿಂಗ್ ಅವರ ಬಹಳ ದೊಡ್ಡ ಅಭಿಮಾನಿಯಾಗಿದ್ದರು. ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿದ್ದರೆ ಕರ್ನಾಟಕಕ್ಕೆ ಇನ್ನೊಬ್ಬ ಖುಷ್ವಂತ್ ಸಿಂಗ್ ಸಿಗುತ್ತಿದ್ದರೇನೋ. ಇಂಗ್ಲೀಷ್ ಸಾಹಿತ್ಯ, ಶಾಯಿರಿ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನಿಸ್ಸೀಮರಾಗಿದ್ದ ರವಿ ಬೆಳಗೆರೆ ಅಗಲಿದ್ದಾರೆ. ರವಿ ಬೆಳಗೆರೆ ಈಟಿವಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಬಹಳ ಅದ್ಭುತವಾಗಿ ನಡೆಸಿಕೊಡುತ್ತಿದ್ದರು. ರವಿ ಬೆಳಗೆರೆಯವರ ಪಾಸಿಟಿವ್ ವಿಚಾರಗಳು ಏನಿದ್ದವೋ ಅವುಗಳನ್ನು ಫಾಲೋ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಪತ್ರಿಕೋದ್ಯಮದಲ್ಲಿ ಹಲವು ವಿವಾದಗಳನ್ನು ಬೆಳಗೆರೆ ಸೃಷ್ಟಿಸಿಕೊಂಡರೂ ಪ್ರತೀ ಬಾರಿ ತಮ್ಮನ್ನು ತಿದ್ದಿಕೊಂಡು ಮತ್ತೆ ಹೊಸ ಬರವಣಿಗೆ ಆರಂಭಿಸುತ್ತಿದ್ದರು. ಅವರ ವಿಚಾರಗಳನ್ನು ಒಪ್ಪತಕ್ಕಂತಹ ಪತ್ರಕರ್ತರಿರಬಹುದು, ವಿಚಾರಗಳೊಂದಿಗೆ ಭಿನ್ನಾಭಿಪ್ರಾಯ ಇಟ್ಟುಕೊಂಡಂತಹ ಲೇಖಕರು, ಸಾಹಿತಿಗಳಿರಬಹುದು, ಕರ್ನಾಟಕದ ಒಂದು ತಲೆಮಾರಿನ ಬಹುತೇಕ ಪತ್ರಕರ್ತರನ್ನು, ಬರಹಗಾರರನ್ನು ಒಂದಲ್ಲ ಒಂದು ರೀತಿ ಬೆಳಗೆರೆ ಪ್ರಭಾವಿಸಿದ್ದಾರೆ ಎಂಬುದು ಸತ್ಯ ಎಂದರು.

ರವಿ ಬೆಳಗೆರೆಯವರಲ್ಲಿ ನೆಗೆಟಿವ್ ಅಂಶಗಳಿದ್ದರೂ ಈ ಸಂದರ್ಭ ಅವು ಅಂಥ ಮಹತ್ವದ್ದಲ್ಲ ಎಂದು ರವಿ ಬೆಳಗೆರೆ ಬಗ್ಗೆ ತನ್ನ ಅನಿಸಿಕೆಯನ್ನು ಶಶಿಧರ್ ಹೆಮ್ಮಾಡಿ ವ್ಯಕ್ತಪಡಿಸಿದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರವಿ ಬೆಳಗೆರೆ ಶೃದ್ಢಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಅನೇಕ ಯುವ ಪತ್ರಕರ್ತರಿಗೆ ರವಿ ಬೆಳಗೆರೆಯವರ ಬರಹಗಳು ಸ್ಫೂರ್ತಿದಾಯಕ ಮತ್ತು ಪ್ರೇರಣೆಯೂ ಆಗಿದ್ದವು. ಅವರ ಅಧ್ಯಯನಶೀಲತೆ, ಧೈರ್ಯ, ಬತ್ತದ ಉತ್ಸಾಹ ಮೆಚ್ಚುವಂಥದ್ದು’ ಎಂದು ರಕ್ಷಿತ್ ಬೆಳಪು ಹೇಳಿದರು.

ಸಂಘದ ಕಾರ್ಯದರ್ಶಿ ನಾಗರಾಜ್ ರಾಯಪ್ಪನ ಮಠ ಸ್ವಾಗತಿಸಿ, ಶ್ರೀಕಾಂತ ಹೆಮ್ಮಾಡಿ ವಂದಿಸಿದರು.

ಸಂಘದ ಸದಸ್ಯರಾದ ದಿನೇಶ್ ರಾಯಪ್ಪನ ಮಠ, ಪ್ರಶಾಂತ್ ಪಾದೆ, ಶ್ರೀಕರ್, ನಾಗರಾಜ ವಂಡ್ಸೆ, ಸಿಲ್ವೆಸ್ಟರ್, ರಾಘವೇಂದ್ರ ಬಳ್ಕೂರು, ರಾಜೇಶ್ ಕುಂದಾಪುರ ಉಪಸ್ಥಿತರಿದ್ದರು.

Get real time updates directly on you device, subscribe now.