ತಂದೆಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲು ಹತ್ತು ಕಿ.ಮೀ ನಡೆದ ಆರನೇ ತರಗತಿ ಬಾಲಕಿ

ಬಾಲಕಿಯ ತಾಯಿ ಎರಡು ವರ್ಷಗಳ ಹಿಂದೆ ನಿಧನ ಹೊಂದಿದ್ದು, ತಂದೆ ಎರಡನೇ ವಿವಾಹದ ಬಳಿಕ ಮಗಳನ್ನು ಮನೆಯಿಂದ ಹೊರ ಹಾಕಿದ್ದ.

ಮಧ್ಯಾಹ್ನದ ಊಟಕ್ಕಾಗಿ ಸರಕಾರ ನೀಡುತ್ತಿರುವ 8ರೂ. ಮತ್ತು ಅಕ್ಕಿಯನ್ನು ತಂದೆ ಲಪಟಾಯಿಸುವುದರ ವಿರುದ್ಧ ಜಿಲ್ಲಾಧಿಕಾರಿಯವರಿಗೆ ದೂರು.

ಕರಾವಳಿ ಕರ್ನಾಟಕ ವರದಿ
ಕೇಂದ್ರಪಾರ(ಒಡಿಶಾ): ಬಾಲಕಿಯೋರ್ವಳು ಸರಕಾರ ತನಗೆ ನೀಡುತ್ತಿರುವ ಹಣ ಮತ್ತು ಅಕ್ಕಿಯನ್ನು ತಂದೆ ಲಪಟಾಯಿಸುವುದರ ವಿರುದ್ಧ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾಳೆ. ಆರನೇ ತರಗತಿಯ ವಿದ್ಯಾರ್ಥಿನಿಯಾದ ಬಾಲಕಿ ಕೇಂದ್ರಪಾರದಲ್ಲಿರುವ ಜಿಲ್ಲಾಧಿಕಾರಿಯವರಿಗೆ ದೂರು ನೀಡಲು ಹತ್ತು ಕಿ.ಮೀ ನಡೆದಿದ್ದಳು.

ಬಾಲಕಿಯ ದೂರು ಪರಿಶೀಲಿಸಿದ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಅವರು ಬಾಲಕಿಯ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸುವಂತೆ ಹಾಗೂ ಬಾಲಕಿಯ ತಂದೆ ಅಕ್ರಮವಾಗಿ ಪಡೆದುಕೊಂಡ ಹಣ ಮತ್ತು ಅಕ್ಕಿ ಹಿಂದಿರುಗಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಕೇಂದ್ರಪಾರ ಜಿಲ್ಲೇಯ ಶಿಕ್ಷಣಾಧಿಕಾರಿ ಸಂಜೀಬ್ ಸಿಂಗ್ ಹೇಳಿದರು.

ಲಾಕ್‌ಡೌನ್ ಘೋಷಣೆಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ ಪ್ರತಿದಿನ 150ಗ್ರಾಂ. ಅಕ್ಕಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಅಥವಾ ಭ್ಯಾಂಕ್ ಖಾತೆ ಇಲ್ಲದಿದ್ದರೆ ಹೆತ್ತವರ ಖಾತೆಗೆ 8ರೂ. ಹಾಕಲಾಗುತ್ತಿತ್ತು.

ಈ ಪ್ರಕರಣದಲ್ಲಿ ಬಾಲಕಿಯ ತಂದೆಯ ಖಾತೆಗೆ 8ರೂ. ಹಣ ಜಮಾ ಮಾಡಲಾಗುತ್ತಿತ್ತು. ಬಾಲಕಿಯ ಜೊತೆ ವಾಸಿಸದ ತಂದೆ ಆಕೆಯ ಹೆಸರಿನಲ್ಲಿ ಅಕ್ಕಿಯನ್ನು ಕೂಡ ಶಾಲೆಯಿಂದ ಸಂಗ್ರಹಿಸುತ್ತಿದ್ದ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.

.ಬಾಲಕಿಯ ತಾಯಿ ಎರಡು ವರ್ಷಗಳ ಹಿಂದೆ ನಿಧನ ಹೊಂದಿದ್ದು, ತಂದೆ ಎರಡನೇ ವಿವಾಹದ ಬಳಿಕ ಮಗಳನ್ನು ಮನೆಯಿಂದ ಹೊರ ಹಾಕಿದ್ದ. ಬಾಲಕಿ ತನ್ನ ಮಾವನ ಮನೆಯಲ್ಲಿ ಆಶ್ರಯ ಪಡೆದಿದ್ದಳು.

Get real time updates directly on you device, subscribe now.