ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿಗೆ ಗೊಂಬೆಯಾಟ ಅರ್ಥಧಾರಿ ಹೆಮ್ಮಾಡಿ ನಾರಾಯಣ ಬಿಲ್ಲವ ಆಯ್ಕೆ

ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಹೆಸರಿನಲ್ಲಿ ನೀಡುವ ಪ್ರಶಸ್ತಿ.

ಗೊಂಬೆಯಾಟದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆಗಳಲ್ಲಿ ಭಾಷಾ ತೊಡಕಿಲ್ಲದೆ, ಯಕ್ಚಗಾನಕ್ಕೆ ಲೋಪವಾಗದೆ ಸಮರ್ಥ ಅರ್ಥವನ್ನು ನಿರರ್ಗಳವಾಗಿ ಹೇಳಿ ದೇಶ ವಿದೇಶಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಇವರ ಕಲಾವಂತಿಕೆಗೆ ಸಾಕ್ಷಿ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಹೆಸರಿನಲ್ಲಿ ನೀಡುವ 2020-21 ರ ಸಾಲಿನ ಪ್ರಶಸ್ತಿಗೆ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ  ಮಂಡಳಿ, ಉಪ್ಪಿನಕುದ್ರು ಅರ್ಥಧಾರಿ ಹೆಮ್ಮಾಡಿ ನಾರಾಯಣ ಬಿಲ್ಲವ ಆಯ್ಕೆಯಾಗಿದ್ದಾರೆ. ಉಪ್ಪಿನ ಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಪ್ರಶಸ್ತಿಗೆ ನಾರಾಯಣ ಬಿಲ್ಲವರನ್ನು ಆಯ್ಕೆ ಮಾಡಿದೆ.

ಜನವರಿಯಲ್ಲಿ ನಡೆಯುವ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾಗವಹಿಸುವ ವಿಶೇಷ ಗಣ್ಯರಿಂದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

1976ರಿಂದ ಕೊಗ್ಗ ಕಾಮತ್ ನೇತೃತ್ವದ ಗೊಂಬೆಯಾಟ ತಂಡದಲ್ಲಿ ಸೇರ್ಪಡೆಗೊಂಡು ಗೊಂಬೆ ಕುಣಿತ, ರಿಪೇರಿ ಹಾಗೂ ಅರ್ಥಗಾರಿಕೆ ತರಬೇತಿ ಪಡೆದು ಗೊಂಬೆಯಾಟದ ಸಮರ್ಥಅರ್ಥಧಾರಿಯಾಗಿ  ನಾರಾಯಣ ಬಿಲ್ಲವ ಮಿಂಚಿದರು. ಈ ನಿಟ್ಟಿನಲ್ಲಿ ಪ್ರಸಿದ್ಧ ಕಲಾವಿದರಾದ ಐರೋಡಿ ರಾಮಗಾಣಿಗ, ಹಳ್ಳಾಡಿ ಸುಬ್ರಾಯ ಮಲ್ಯ, ಮಹಾಬಲೇಶ್ವರ ಶೇಟ್ ಹಾಗೂ ಯು. ವಾಮನ್ ಪೈ ಇವರ ಸಹವಾಸ ಇವರ ವ್ಯಕ್ತಿತ್ವಕ್ಕೆಚಿನ್ನದ ಮೆರುಗನ್ನು ನೀಡಿತು. ಬಹುಮುಖ ವ್ಯಕ್ತಿತ್ವದ  ಬಿಲ್ಲವ ಶ್ರದ್ಧೆ, ನಿಷ್ಟೆ, ತ್ಯಾಗಗಳಿಂದ ಹಾಗೂ ಸರಳ ವ್ಯಕ್ತಿತ್ವದಿಂದಲೂ ಎಲ್ಲರ ಗಮನ ಸೆಳೆದವರು. ಗೊಂಬೆಯಾಟದ ಯಶಸ್ಸಿನ ಹಾದಿಯಲ್ಲಿ ಕೊಡುಗೆಯೂ ಕೂಡ ಅತ್ಯಂತ ವಿಶೇಷವಾದದ್ದು ಎಂಬುದು ಪ್ರಶಸ್ತಿಗೆ ಇವರ ಆಯ್ಕೆಗೆ ಮಹತ್ವದ ಕಾರಣವಾಗಿದೆ.

ವಿಶೇಷ ಕಲಾ ಪ್ರೌಢಿಮೆಯಿಂದ ಹಾಗೂ ವಿಶಿಷ್ಟ ಸ್ವರ ಭಾರದಿಂದ ಎಲ್ಲರ ಗಮನ ಸೆಳೆದವರು. ಅತ್ಯಂತ ಸೀದಾ ಸಾದಾ ವ್ಯಕ್ತಿಯಾಗಿ, ತಂಡಕ್ಕೆ ಪ್ರೇರಕರಾಗಿ ಇತರರಿಗೂ ಮಾರ್ಗದರ್ಶಕರಾಗಿಗೊಂಬೆಯಾಟದಲ್ಲಿ ಹೊಸತನಕ್ಕೆಒಗ್ಗಿಕೊಂಡು ತಾನೂ ಬೆಳೆಯುವುದರೊಂದಿಗೆ ಗೊಂಬೆಯಾಟವನ್ನೂ ವಿಶಿಷ್ಟವಾಗಿ ಬೆಳೆಸಿದರು. ಗೊಂಬೆಯಾಟದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆಗಳಲ್ಲಿ  ಭಾಷಾ ತೊಡಕಿಲ್ಲದೆ, ಯಕ್ಚಗಾನಕ್ಕೆ ಲೋಪವಾಗದೆ ಸಮರ್ಥ ಅರ್ಥವನ್ನು ನಿರರ್ಗಳವಾಗಿ ಹೇಳಿ ದೇಶ -ವಿದೇಶಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಇವರ ಕಲಾವಂತಿಕೆಗೆ ಸಾಕ್ಷಿಯಾಗಿದೆ.

ಅರ್ಥಗಾರಿಕೆಯಲ್ಲಿ ತನ್ನದೇ ಛಾಪನ್ನು ಮೂಡಿಸಿದ ಬಿಲ್ಲವರು ಧ್ವನಿ ವೈವಿಧ್ಯತೆಯಲ್ಲೂ  ಸದಾ ಎತ್ತಿದ ಕೈ. ಹೆಣ್ಣು ಹಾಗೂ ಗಂಡು ಎರಡೂ ಸ್ವರ ಬೇಧಗಳನ್ನು ಸಮರ್ಥವಾಗಿ ಪ್ರಸ್ತುತ ಪಡಿಸಿರುವುದಲ್ಲದೆ ರಾಕ್ಷಸರ ಕೂಗಿನಲ್ಲೂ ವಿಶೇಷ ಛಾಪನ್ನು ಮೂಡಿಸಿ ಎಲ್ಲರ ಹೃನ್ಮನ ಗೆದ್ದವರು.

ನಾರಾಯಣ ಬಿಲ್ಲವ

1978ರ ನಂತರ ಉಪ್ಪಿನಕುದ್ರು ಗೊಂಬೆಯಾಟ ತಂಡದೊಂದಿಗೆ ಫ್ರಾನ್ಸ್, ಹಾಲೆಂಡ್, ಆಸ್ಟ್ರೇಲಿಯಾ, ಸ್ವಿಡ್ಜರ್ಲ್ಯಾಂಡ್, ಗ್ರೀಸ್, ಜರ್ಮನಿ, ರಷ್ಯಾ, ಬೆಲ್ಜಿಯಂ, ಥೈಲ್ಯಾಂಡ್, ಸಿಂಗಾಪುರ, ಜಪಾನ್, ಲಂಡನ್, ಹೀಗೆ ಹಲವಾರು ವಿದೇಶ ಪ್ರವಾಸಗಳಲ್ಲಿ ಭಾಗವಹಿಸಿದ್ದಾರೆ. 2005ರಲ್ಲಿ ಗೊಂಬೆಯಾಟ ಟ್ರಸ್ಟ್ ವತಿಯಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ರಂಗಸ್ಥಳ ಪ್ರಶಸ್ತಿಗೂ ಭಾಜನರಾಗಿದ್ದು, ನಾಡಿನ ಅನೇಕ ಸಂಘ ಸಂಸ್ಥೆಗಳು ಬಿರುದು ಬಾವಲಿ ನೀಡಿ ಗೌರವಿಸಿದೆ.

ಲಕ್ಷ್ಮೀ ಮತ್ತು ದಿ. ಎಚ್.ನಾಗಪ್ಪ ಬಿಲ್ಲವ ದಂಪತಿಗಳ ಪುತ್ರರಾಗಿ 1954ರಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಜನಿಸಿದ ನಾರಾಯಣ ಬಿಲ್ಲವರು ಪ್ರಾಥಮಿಕ ಶಾಲಾ ಶಿಕ್ಷಣವನ್ನು  ಹೆಮ್ಮಾಡಿಯಲ್ಲಿ ಮುಗಿಸಿದರು. ಬಾಲ್ಯದಿಂದಲೂ ಯಕ್ಷಗಾನದ ಗೀಳನ್ನು ಅಂಟಿಸಿಕೊಂಡ ಇವರಿಗೆ ಅದೇ ಹವ್ಯಾಸವಾಗಿತ್ತು. ಸ್ಥಳೀಯ ಯಕ್ಷಗಾನ ಸಂಘಗಳಲ್ಲಿ ಭಾಗವಹಿಸಿ ಮಹಿಸಾಸುರ, ಕರಾಳನೇತ್ರೆ, ಹಾಸ್ಯ ಪಾತ್ರಗಳನ್ನು  ಸಮರ್ಥವಾಗಿ ನಿರ್ವಹಿಸಿ ಎಲ್ಲರಿಂದಲೂ ಸೈಯೆನಿಸಿಕೊಂಡರು.

 

 

 

 

 

 

 

 

 

 

Get real time updates directly on you device, subscribe now.