ಜಾತಿ ಗಣತಿಗೆ ಶೀಘ್ರವೇ ತಾರ್ಕಿಕ ಅಂತ್ಯ: ಜಯಪ್ರಕಾಶ್ ಹೆಗ್ಡೆ

ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹೆಗ್ಡೆ ಮಾತನಾಡಿದರು.

ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಿದಂತೆ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಗುರುತಿಸುವಂಥ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ಹೆಗ್ಡೆ ವಿಶ್ವಾಸ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ 160ಕೋಟಿ ರೂ. ವೆಚ್ಚದಲ್ಲಿ ಸಿದ್ದಪಡಿಸಿರುವ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜನಗಣತಿ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದರ ಜೊತೆಗೆ ಅದನ್ನು ಶೀಘ್ರವೇ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಮಾತನಾಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರಕಾರಕ್ಕೆ ಇನ್ನೂ ಒಪ್ಪಿಸಿಲ್ಲ. ಈ ಬಗ್ಗೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ವರದಿ ಒಪ್ಪಿಕೊಳ್ಳುವುದು ಮತ್ತು ಅದನ್ನು ಜಾರಿ ಮಾಡುವುದು ಸರಕಾರಕ್ಕೆ ಬಿಟ್ಟ ವಿಚಾರ ಎಂದು ಹೆಗ್ಡೆ ಹೇಳಿದರು.

ಹಿಂದುಳಿದ ಸಣ್ಣಪುಟ್ಟ ಸಮಾಜಗಳಿಗೆ ನ್ಯಾಯ ಒದಗಿಸಲು ಪಕ್ಷ ನೀಡಿದ ಈ ಒಂದು ಸದವಕಾಶದಿಂದ ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ. ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿ ಸಾಮಾಜಿಕ ನ್ಯಾಯದ ವ್ಯಾಪ್ತಿಗೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯೇತರವಾಗಿ ಕೆಲಸ ಮಾಡಲು ಉತ್ತಮ ಅವಕಾಶ ನೀಡಿದ್ದಾರೆ. ಹಿಂದೆ ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಿದಂತೆ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಎಲ್ಲರೂ ಗುರುತಿಸುವಂಥ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಪಿ. ವಸಂತ ಕುಮಾರ್ ಅವರಿಂದ ಹೂಗುಚ್ಛ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಂಡ ಹೆಗ್ಡೆ, ಅಧಿಕಾರ ವಹಿಸಿಕೊಂಡ ತಕ್ಷಣ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

Get real time updates directly on you device, subscribe now.