ವಿಧಾನಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನೋಟೀಸ್

ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಹೇಳಿದೆ.

ಪ್ರತಾಪಚಂದ್ರ ಶೆಟ್ಟಿಯವರು ಸಭಾಪತಿಯಾಗಿ ನಿಷ್ಪಕ್ಷವಾಗಿ ಸದನದಲ್ಲಿ ವರ್ತಿಸುತ್ತಿಲ್ಲ. ಕಾಂಗ್ರೆಸ್ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆಂಬ ಭಾವನೆ ಮೂಡಿದ್ದು, ಸದಸ್ಯರಲ್ಲಿ ಅವರ ಬಗ್ಗೆ ವಿಶ್ವಾಸವಿಲ್ಲ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಮೇಲ್ಮನೆ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿಯವರ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸದಸ್ಯರು ಪರಿಷತ್ ಕಾರ್ಯದರ್ಶಿಯವರಿಗೆ ನೋಟೀಸ್ ನೀಡಿದ್ದಾರೆ.

ಪ್ರತಾಪಚಂದ್ರ ಶೆಟ್ಟಿಯವರು ಸಭಾಪತಿಯಾಗಿ ನಿಷ್ಪಕ್ಷವಾಗಿ ಸದನದಲ್ಲಿ ವರ್ತಿಸುತ್ತಿಲ್ಲ. ಅವರು ಕಾಂಗ್ರೆಸ್ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆಂಬ ಭಾವನೆ ಮೂಡಿದ್ದು, ಸದಸ್ಯರಲ್ಲಿ ಅವರ ಬಗ್ಗೆ ವಿಶ್ವಾಸವಿಲ್ಲ. ಅವರು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಹೇಳಿದೆ.

ಕಳೆದ ಅಧಿವೇಶನ ಸಂದರ್ಭ ಎರಡು ಮಸೂದೆಗಳ ಮಂಡನೆ ಆಗಲಿಲ್ಲ. ಕಾರ್ಮಿಕ ಮಸೂದೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯದೇ ಅನಿರ್ದಿಷ್ಟಾವಧಿಗೆ ಸದನ ಮುಂದೂಡಿದರು ಎಂದು ಬಿಜೆಪಿ ಸದಸ್ಯರು ಅಸಮಾಧಾನಗೊಂಡಿದ್ದಾರೆ. ರಾಜ್ಯಸಭೆಯಲ್ಲೂ ಹೀಗೆ ನಡೆಯುವುದಿಲ್ಲ ಎಂದು ತಮ್ಮ ಅಸಮಾಧಾನ ಪ್ರಕಟಿಸಿದ್ದಾರೆ.

ಮಧ್ಯರಾತ್ರಿ ತನಕ ಸದನ ನಡೆಸಿ ಮಸೂದೆ ಮಂಡಿಸಲು ಅವಕಾಶ ನೀಡದೇ ಸದನ ಮುಂದೂಡಿ ಹೋಗುವುದು ಎಷ್ಟು ಸರಿ. ಕಳೆದ ಅಧಿವೇಶನದಲ್ಲಿ ಕಲಾಪ ಸರಿಯಾಗಿ ನಡೆಸಿದ್ದರೆ ಮೂರೂ ಮಸೂದೆಗಳು ಅಂಗೀಕಾರವಾಗುತ್ತಿದ್ದವು ಎಂದು ಬಿಜೆಪಿಯ ಮಹಾಂತೇಶ ಕವಟಗಿಮಠ ಅವರು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದರು.

ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಮತದಾನಕ್ಕೆ ಒತ್ತಾಯಿಸಿದರೆ ಜೆಡಿಎಸ್ ಬೆಂಬಲಿಸಬಹುದೆಂಬ ವಿಶ್ವಾಸ ಬಿಜೆಪಿಗೆ ಇದೆ ಎನ್ನಲಾಗುತ್ತಿದೆ. ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡುವ ಸೂಚನೆ ಕಂಡುಬಂದಲ್ಲಿ ಸಭಾಪತಿ ರಾಜೀನಾಮೆ ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Get real time updates directly on you device, subscribe now.