ಕುಮಾರಸ್ವಾಮಿಯ ಕಣ್ಣೀರಿಗೆ ಬೆಲೆ ಇಲ್ಲ: ಸಿದ್ದರಾಮಯ್ಯ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ದೇವೇಗೌಡರ ಕುಟುಂಬದವರಿಗೆ ಕಣ್ಣೀರು ಹಾಕುವುದು ಹೊಸತೇನಲ್ಲ. ಅವರು ಒಳ್ಳೆಯದು ಮತ್ತು ಕೆಟ್ಟದ್ದೆರಡಕ್ಕೂ ಕಣ್ಣೀರಿಡುತ್ತಾರೆ. ಇನ್ನ್ಯಾರನ್ನೋ ಓಲೈಸಲು ಕಣ್ಣೀರು ಹಾಕುತ್ತಾರೆ.
ಕರಾವಳಿ ಕರ್ನಾಟಕ ವರದಿ
ಬೆಳಗಾವಿ: ‘ಸಿದ್ದರಾಮಯ್ಯ ಪ್ರೀಪ್ಲಾನ್ನಿಂದ ನನ್ನ ಹೆಸರು ಹಾಳು ಮಾಡಿದರು’. ‘ಸಿದ್ದರಾಮಯ್ಯ ಕುತಂತ್ರ ಮತ್ತು ದೇವೇಗೌಡರ ಭಾವನಾತ್ಮಕ ಮಾತಿಗೆ ಟ್ರ್ಯಾಪ್ ಆಗಿ ಹೆಸರುಕೆಡಿಸಿಕೊಂಡೆ’ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ರಾಜಕೀಯ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ಕೊಡುತ್ತಿರುತ್ತಾರೆ. ಅವರ ಮಾತಿನಲ್ಲಿ ಸತ್ಯ ಇರುವುದಿಲ್ಲ ಎಂದರು. ದೇವೇಗೌಡರ ಕುಟುಂಬದವರಿಗೆ ಕಣ್ಣೀರು ಹಾಕುವುದು ಹೊಸತೇನಲ್ಲ. ಅವರು ಒಳ್ಳೆಯದು ಮತ್ತು ಕೆಟ್ಟದ್ದೆರಡಕ್ಕೂ ಕಣ್ಣೀರಿಡುತ್ತಾರೆ. ಇನ್ನ್ಯಾರನ್ನೋ ಓಲೈಸಲು ಕಣ್ಣೀರು ಹಾಕುತ್ತಾರೆ. ಕುಮಾರಸ್ವಾಮಿ ಸೇರಿದಂತೆ ಆ ಕುಟುಂಬದವರ ಕಣ್ಣೀರಿಗೆ ಬೆಲೆ ಇಲ್ಲ ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರಗೈದಿದ್ದಾರೆ.
ಕುಮಾರಸ್ವಾಮಿ ಸಮ್ಮಿಶ್ರ ಸರಕಾರವಿದ್ದಾಗ ಹನ್ನೆರಡು ತಿಂಗಳು ಅಧಿಕಾರ ನಡೆಸಿದ್ದಾರೆ. ಆದರೆ ಅವರು ಆಡಳಿತ ನಡೆಸಿದ್ದು ಸ್ಟಾರ್ ಹೊಟೇಲ್ನಿಂದ. ಯಾವ ಶಾಸಕ ಹಾಗೂ ಸಚಿವರ ಕೈಗೂ ಸಿಗಲಿಲ್ಲ ಆ ಆಸಾಮಿ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಕೊಟ್ಟೆ ಎನ್ನುತ್ತಾರಲ್ಲ, ಅವರೇನು ಅವರ ಮನೆಯಿಂದ ಕೊಟ್ಟಿದ್ದಾರಾ? ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಕೊಟ್ಟಿದ್ದೆ. ಅದು ಜನರ ತೆರಿಗೆ ಹಣ ಎಂದು ಸಿದ್ದರಾಮಯ್ಯ ಹೇಳಿದರು.
ಅವರಿಗೆ ಗುಡ್ ವಿಲ್ ಇಲ್ಲ. ಅದಿದ್ದರೆ ಅಲ್ವಾ ಹಾಳಾಗುವ ಪ್ರಶ್ನೆ ಬರುವುದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.