ರೈತರ ಪರ ಮಾತಾಡುವವರು ‘ಮನುಷ್ಯರು’; ಅಧಿಕಾರಸ್ಥರ ಪಿತೂರಿ ಬಗ್ಗೆ ಮಾತಾಡುತ್ತಿದ್ದಾರೆ: ಸೋನಾಕ್ಷಿ ಸಿನ್ಹಾ

ಗ್ರೆಟ್ಟಾ, ರಿಹಾನಾ ಮುಂತಾದವರು ಅನ್ಯಗ್ರಹ ಜೀವಿಗಳಲ್ಲ. ನಮ್ಮಂತೆ ಮನುಷ್ಯರಾಗಿದ್ದಾರೆ. ಮಾನವ ಹಕ್ಕುಗಳಿಗಾಗಿ ಮಾತಾಡುತ್ತಿದ್ದಾರೆ.

ಮಾಧ್ಯಮಗಳು ಮತ್ತು ಸರಕಾರದ ಪಿತೂರಿಯಿಂದ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ರೈತರ ಪರವಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ರೈತರ ಪ್ರತಿಭಟನೆ ಬೆಂಬಲಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಭಾರತದ ಹಲವು ಕ್ಷೇತ್ರಗಳ ಗಣ್ಯರು ಸರಕಾರ ಬೆಂಬಲಿಸಿ ಟ್ವೀಟ್ ಮಾಡಲು ಆರಂಭಿಸಿದ್ದರು. ಈಗ ಸೋನಾಕ್ಷಿ ಸಿನ್ಹಾ ಅವರ ಇನ್ ಸ್ಟಾಗ್ರಾಮ್ ಸ್ಟೋರಿ ಗಮನ ಸೆಳೆದಿದೆ.

ಗ್ರೆಟ್ಟಾ, ರಿಹಾನಾ ಮುಂತಾದವರು ‘ಹೊರಗಿನವರು’, ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಇವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅರ್ನಾಬ್ ಗೋಸ್ವಾಮಿ ಹೇಳುವುದನ್ನು ನಂಬುವ ಮೊದಲು ನೀವು ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಸೋನಾಕ್ಷಿ ಹೇಳಿದ್ದಾರೆ.

ಅವರಿಗೆ ವಿವಾದಿತ ಕಾಯ್ದೆಗಳಲ್ಲಿ ಇರುವುದೇನು ಎಂಬುದು ತಿಳಿಯದೇ ಇರಬಹುದು. ವಿಷಯ ಅದಷ್ಟೇ ಅಲ್ಲ. ಮಾನವ ಹಕ್ಕುಗಳ ಮೇಲೆ ನಡೆಯುತ್ತಿರುವ ದಾಳಿ, ಪಿತೂರಿಗಳು, ಅಧಿಕಾರ ದುರ್ಬಳಕೆ, ಪ್ರಚೋದನಾಕಾರಿ ಹೇಳಿಕೆಗಳು, ಇಂಟರ್ನೆಟ್ ಸ್ಥಗಿತಗೊಳಿಸಿರುವುದು ಮುಂತಾದ ವಿಷಯಗಳ ಬಗ್ಗೆ ಎಲ್ಲರೂ ಧ್ವನಿ ಎತ್ತುತ್ತಿದ್ದಾರೆ. ಅವರು ಅನ್ಯಗ್ರಹ ಜೀವಿಗಳಲ್ಲ. ನಮ್ಮಂತೆ ಮನುಷ್ಯರಾಗಿದ್ದಾರೆ. ಮಾನವ ಹಕ್ಕುಗಳಿಗಾಗಿ ಮಾತಾಡುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ ಎಂದು ಸೋನಾಕ್ಷಿ ಹೇಳಿದ್ದಾರೆ.

ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಮಾಧ್ಯಮಗಳು ಮತ್ತು ಸರಕಾರದ ಪಿತೂರಿಯಿಂದ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ‘ದೇಶ್ ಕಿ ಗದ್ದಾರೋಂ ಕೊ, ಗೋಲಿ ಮಾರೋ ಸರ್ದಾರೋಂ ಕೊ’’ ಎಂಬಂಥ ಪ್ರಚೋದನಕಾರಿ ಹಾಗೂ ದ್ವೇಷದ ಮಾತುಗಳನ್ನು ಹೇಳಲಾಗುತ್ತಿದ್ದು, ಈ ವಿಷಯಗಳೇ ದೇಶದಾದ್ಯಂತ ಸುದ್ದಿಯಾಗಿವೆ. ಇವರು ಹೊರಗಿನವರು. ಇವರ ಮಾತು ಕೇಳಬೇಡಿ ಎಂದು ಹಲವರು ಹೇಳಲು ಬರಬಹುದು. ಯಾವ ಕಾರಣಕ್ಕೂ ಬಣ್ಣ ಹಚ್ಚಲು ಬರುವವರ ಮಾತುಗಳಿಗೆ ಬಲಿಬೀಳಬೇಡಿ. ಇದು ಮನುಷ್ಯರ ವಿಚಾರವಾಗಿದೆ ಎಂದು ಸೋನಾಕ್ಷಿ ಹೇಳಿದ್ದಾರೆ.

Get real time updates directly on you device, subscribe now.