ಜಗತ್ತಿನ ಅಚ್ಚರಿ: ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಗೆ ಬೇರೆ ಮುಖ, ಕೈಗಳ ಜೋಡಣೆ

ಈ ಶಸ್ತ್ರಚಿಕಿತ್ಸೆಗೆ ಒಳಗಾದ ವಿಶ್ವದ ಮೊದಲ ವ್ಯಕ್ತಿ ನ್ಯೂ ಜೆರ್ಸಿ ನಿವಾಸಿ ಜೊ ಡಿಮಿಯೊ(22).

ಹೊಸ ಮುಖ ಮತ್ತು ಕೈಗಳು ಡಿಮಿಯೊ ಅವರ ದೇಹಕ್ಕೆ ಹೊಂದಿಕೊಂಡಿದ್ದು, ಯಾವುದೇ ತೊಂದರೆಯಾಗಿಲ್ಲ.

ಕರಾವಳಿ ಕರ್ನಾಟಕ ವರದಿ
ನ್ಯೂಯಾರ್ಕ್: ಕಾರು ಉರುಳಿಬಿದ್ದ ಸಂದರ್ಭ ಗಂಭೀರ ಗಾಯಗೊಂಡಿದ್ದ ಯುವಕನೋರ್ವನಿಗೆ ಮುಖ ಮತ್ತು ಕೈಗಳನ್ನು ಕಸಿ ಮಾಡಿರುವ ವೈದ್ಯಕೀಯ ಲೋಕದ ಅಚ್ಚರಿಯ ಘಟನೆಯೊಂದು ವರದಿಯಾಗಿದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾದ ವಿಶ್ವದ ಮೊದಲ ವ್ಯಕ್ತಿ ನ್ಯೂ ಜೆರ್ಸಿ ನಿವಾಸಿ ಜೊ ಡಿಮಿಯೊ(22) ಅವರಾಗಿದ್ದಾರೆ.

ಮುಖ ಮತ್ತು ಕೈಗಳನ್ನು ಡಿಮಿಯೋ ಅವರಿಗೆ ಕಸಿ ಮಾಡಲಾದ ಬಗ್ಗೆ ವೈದ್ಯಕೀಯ ತಂಡ ಬುಧವಾರ ಬಹಿರಂಗಗೊಳಿಸಿದೆ.

2018ರಲ್ಲಿ ರಾತ್ರಿ ಪಾಳಿ ಬಳಿಕ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಜೊ ಡಿಮಿಯೊ ನಿದ್ರೆಗೆ ಜಾರಿದ್ದರು. ಈ ಸಂದರ್ಭ ಕಾರು ಕಂಬಕ್ಕೆ ಗುದ್ದಿ ಪಲ್ಟಿಗೊಂಡಿದ್ದು ಹೊತ್ತಿ ಉರಿದ ಕಾರಿನಲ್ಲಿ ಜೋ ಡಿಮಿಯೊ ಗಂಭೀರ ಗಾಯಗೊಂಡಿದ್ದರು. ಆ ಬಳಿಕ ಜೋ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದು, ಅವರಿಗೆ ಇಪ್ಪತ್ತು ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿತ್ತು.

ಕಳೆದ ಆಗಸ್ಟ್ ತಿಂಗಳಲ್ಲಿ ಇವರಿಗೆ ಹೊಂದುವ ದೇಹದ ದಾನಿಯನ್ನು ವೈದ್ಯಕೀಯ ತಂಡದ ಸತತ ಶೋಧದ ಮೂಲಕ ಪತ್ತೆಹಚ್ಚಲಾಗಿತ್ತು. ಕೈಗಳು, ಮುಖವನ್ನು ಜೋ ಡಿಮಿಯೊಗೆ ಜೋಡಿಸಲಾಯಿತು.

ಆ.12,2020ರಂದು 23ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರು, ನರ್ಸ್ ಸೇರಿ 96 ಆರೋಗ್ಯ ಸಿಬಂದಿ ಪಾಲ್ಗೊಂಡಿದ್ದರು.

ನವೆಂಬರ್‌ ತಿಂಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಡಿಮಿಯೊ ಮನೆಗೆ ತೆರಳಿದ್ದಾರೆ. ಕಣ್ನು ರೆಪ್ಪೆಗಳನ್ನು ಮುಚ್ಚುವುದು, ಬಾಯಿ ಮುಕ್ಕಳಿಸುವುದು, ಹುಬ್ಬುಗಳನ್ನು ಹಾರಿಸುವುದು ಇತ್ಯಾದಿ ವ್ಯಾಯಾಮ ಮಾಡುತ್ತಿದ್ದಾರೆ. ಹೊಸ ಮುಖ ಮತ್ತು ಕೈಗಳು ಅವರ ದೇಹಕ್ಕೆ ಹೊಂದಿಕೊಂಡಿದ್ದು, ಯಾವುದೇ ತೊಂದರೆಯಾಗಿಲ್ಲ.

ಡಿಮಿಯೊ ಈಗ ತಾವೇ ಊಟ ಮಾಡುತ್ತಿದ್ದಾರೆ. ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ, ಕೈಗಳಿಂದ ಭಾರ ಎತ್ತುತ್ತಿದ್ದಾರೆ. ಶೂಗಳನ್ನು ಸ್ವತ: ಧರಿಸುತ್ತಿದ್ದಾರೆ. ತಮ್ಮ ಜಾಕೆಟ್-ದಿರಿಸುಗಳನ್ನು ತಾವೇ ಹಾಕಿಕೊಳ್ಳುತ್ತಿದ್ದಾರೆ.

ಜೋ ಡಿಮಿಯೋ ಹೊಸ ಮುಖ ಮತ್ತು ಕೈಗಳೊಂದಿಗೆ ಹೊಸ ಬದುಕು ಆರಂಭಿಸಿದ್ದಾರೆ.

Get real time updates directly on you device, subscribe now.