‘ಮೋದಿಯೊಂದಿಗೆ ವೇದಿಕೆಯಲ್ಲಿರುವುದು ನನ್ನ ಸೌಭಾಗ್ಯ, ಮೋದಿ ದೂರದೃಷ್ಠಿಯ ನಾಯಕ’: ಸುಪ್ರೀಂ ಕೋರ್ಟ್ ನ್ಯಾಯಾಧೀಶ
ಗುಜರಾತ್ ಹೈಕೋರ್ಟ್ ಯಾವತ್ತೂ ಲಕ್ಷ್ಮಣ ರೇಖೆಯನ್ನು ದಾಟಿಲ್ಲ ಎಂಬುದು ನನಗೆ ಹೆಮ್ಮೆಯ ಸಂಗತಿ ಎಂದು ನ್ಯಾಯಮೂರ್ತಿ ಶಾ ಹೇಳಿದರು.
ಈ ಹಿಂದೆ ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭ ಜಸ್ಟಿಸ್ ಶಾ ಅವರು ಪ್ರಧಾನಿ ಮೋದಿ ತಮಗೆ ಹೀರೋ ಮತ್ತು ಮಾದರಿ ಎಂದು ಹೇಳಿದ್ದರು.
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಅತ್ಯಂತ ಜನಪ್ರಿಯ ಮತ್ತು ದೂರದೃಷ್ಠಿಯ ನಾಯಕ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಂ.ಆರ್.ಶಾ ಹೇಳಿದ್ದಾರೆ. ಗುಜರಾತ್ ಹೈಕೋರ್ಟ್ ವಜ್ರಮಹೋತ್ಸವ ಸಂದರ್ಭ ಅಂಚೆಚೀಟಿ ಬಿಡುಗಡೆಗೆ ನಡೆದ ವರ್ಚುವಲ್ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾನ್ಯ ಪ್ರಧಾನಿ ನರೇಂದ್ರಭಾಯಿ ಮೋದಿ ಅವರು ಸಂಸ್ಮರಣಾ ಅಂಚೆಚೀಟಿ ಬಿಡುಗಡೆಗೊಳಿಸುತ್ತಿರುವ ಸಂದರ್ಭ ಭಾಗವಹಿಸುವುದು ನನಗೆ ಹೆಮ್ಮೆಯ ಸಂಗತಿ ಮತ್ತು ನನ್ನ ಸೌಭಾಗ್ಯವಾಗಿದೆ ಎಂದರು.
ಗುಜರಾತ್ ಹೈಕೋರ್ಟ್ ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲೂ ನ್ಯಾಯಾಂಗದ ಸ್ವಾತಂತ್ರ್ಯದ ಪರ ನಿಂತಿದೆ. ತತ್ವಕ್ಕೆ ಬದ್ಧವಾಗಿದೆ ಎಂದು ಜಸ್ಟಿಸ್ ಶಾ ನುಡಿದರು. ಗುಜರಾತ್ ಹೈಕೋರ್ಟ್ ಯಾವತ್ತೂ ಲಕ್ಷ್ಮಣ ರೇಖೆಯನ್ನು ದಾಟಿಲ್ಲ ಎಂಬುದು ನನಗೆ ಹೆಮ್ಮೆಯ ಸಂಗತಿ ಎಂದು ನ್ಯಾಯಮೂರ್ತಿ ಶಾ ಹೇಳಿದರು.
ಈ ಹಿಂದೆ ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭ ಜಸ್ಟಿಸ್ ಶಾ ಅವರು ಪ್ರಧಾನಿ ಮೋದಿ ತಮಗೆ ಹೀರೋ ಮತ್ತು ಮಾದರಿ ಎಂದು ಪತ್ರಕರ್ತರ ಜೊತೆ ಮಾತಾಡುತ್ತಾ ಹೇಳಿದ್ದರು.