ಅಪ್ಪ-ಮಗ ಸೇರಿದಂತೆ 23ನಾಯಕರ ಸಿಡಿಗಳೂ ಹೊರಬರಲಿವೆ: ಯತ್ನಾಳ
ಸತ್ಯ ಯಾವತ್ತಿದ್ದರೂ ಹೊರಗೆ ಬರಬೇಕಲ್ಲ? ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಪ್ಯಾಂಟ್ ಬಿಚ್ಚಿ ಎಂದು ಕಾಂಗ್ರೆಸ್‌ನವರು ಹೇಳಿದ್ದಾರಾ? ನೀವು ಸರಿ ಇದ್ದರೆ ನಿಮ್ಮನ್ನು ಯಾಕೆ ಸಿಕ್ಕಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ರಾಜ್ಯದ ಆಡಳಿತ ನಡೆಸುತ್ತಿರುವ ಅಪ್ಪ-ಮಗ ಸೇರಿದಂತೆ 23ನಾಯಕರ ಸಿ.ಡಿಗಳೂ ಹೊರ ಬರಲಿವೆ. ಎರಡೂ ಪಕ್ಷದ ನಾಯಕರು ಸೇರಿ ರಮೇಶ ಜಾರಕಿಹೊಳಿ ಸಿ.ಡಿ ಬಿಡುಗಡೆ ಮಾಡಿದ್ದಾರೆ. ಅವರು ಸುಮ್ಮನಿರುವುದಿಲ್ಲ. ಎಲ್ಲ ಸಿ.ಡಿಗಳನ್ನೂ ರಮೇಶ ಅವರೇ ಬಿಡುಗಡೆ ಮಾಡಬಹುದು. ಸತ್ಯ ಯಾವತ್ತಿದ್ದರೂ ಹೊರಗೆ ಬರಬೇಕಲ್ಲ? ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ರಾಜ್ಯ ಸರಕಾರ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ.ಪ್ರಕರಣದ ಹಿಂದಿನ ಷಡ್ಯಂತ್ರ ಬಯಲಿಗೆಳೆಯಲು ಎಸ್‌ಐಟಿ(ವಿಶೇಷ ತನಿಖಾ ತಂಡ) ರಚಿಸಿರುವ ಬೆನ್ನಲ್ಲೇ ವಿವಿಧ ಪಕ್ಷದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ರಮೇಶ ಜಾರಕಿಹೊಳಿ ಅವರು ನಕಲಿ ಸಿ.ಡಿ ಎನ್ನುತ್ತಿದ್ದಾರೆ. ನಕಲಿಯಾಗಿದ್ದರೆ ತನಿಖೆ ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಶರ್ಟ್, ಪ್ಯಾಂಟ್ ಬಿಚ್ಚಿ ಎಂದು ಕಾಂಗ್ರೆಸ್‌ನವರು ಹೇಳಿದ್ದಾರಾ? ನೀವು ಸರಿ ಇದ್ದರೆ ನಿಮ್ಮನ್ನು ಯಾಕೆ ಸಿಕ್ಕಿಸುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.
ಸಿ.ಡಿ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ರಮೇಶ ಜಾರಕಿಹೊಳಿಯವರು ತನ್ನ ರಾಜಕೀಯ ತೇಜೋವಧೆ ಹಾಗೂ ಮಾನಹರಣ ಉದ್ದೇಶದಿಂದ ತನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.