ದೇಶದ ಆರ್ಥಿಕ ಸ್ವಾತಂತ್ರ್ಯವನ್ನೇ ಹಾಳು ಮಾಡುತ್ತಿರುವ ಮೋದಿ ಆಡಳಿತ ಹುಚ್ಚುತನದ ಪರಮಾವಧಿ: ಕಾಗೋಡು ತಿಮ್ಮಪ್ಪ

‘ರೈತ ಮಹಾಪಂಚಾಯತ್’ ಪೂರ್ವಭಾವಿ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಕಾಗೋಡು ಮಾತನಾಡಿದರು.

ಮೋದಿ ದೇಶವನ್ನೇ ಹಾಳು ಮಾಡಲು ಹೊರಟಿದ್ದು, ಇದನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟದ ರೀತಿಯಲ್ಲೇ ಪ್ರತಿಭಟಿಸಬೇಕಿದೆ.

ಕರಾವಳಿ ಕರ್ನಾಟಕ ವರದಿ
ಸಾಗರ: ಮೋದಿಯವರು ದೇಶದ ಆರ್ಥಿಕ ಸ್ವಾತಂತ್ರ್ಯವನ್ನೇ ಹಾಳು ಮಾಡಲು ಹೊರಟಿದ್ದಾರೆ. ದಿಕ್ಕುದೆಸೆ ಇಲ್ಲದ ಆರ್ಥಿಕ ನೀತಿಯನ್ನು ಆಡಳಿತದಲ್ಲಿ ಅನುಸರಿಸುವ ಮೂಲಕ ಸಮಾಜವಾದಿ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತವನ್ನು ಕಟ್ಟಲು ಹಲವರು ತ್ಯಾಗ ಬಲಿದಾನ ಮಾಡಿದ್ದಾರೆ. ಆದರೆ ಮೋದಿ ದೇಶವನ್ನೇ ಹಾಳು ಮಾಡಲು ಹೊರಟಿದ್ದು, ಇದನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟದ ರೀತಿಯಲ್ಲೇ ಪ್ರತಿಭಟಿಸಬೇಕಿದೆ ಎಂದು ಕಾಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿರುವ ಪ್ರಧಾನಿ ಮೋದಿ ಆಡಳಿತ ಹುಚ್ಚುತನದ ಪರಮಾವಧಿ ಎಂದು ಕಾಗೋಡು ಟೀಕಾಪ್ರಹಾರಗೈದರು.

ನೌಕರರ ಭವನದಲ್ಲಿ ‘ರೈತ ಮಹಾಪಂಚಾಯತ್’ ಪೂರ್ವಭಾವಿ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭಾರತದ ಸಮಾಜವಾದಿ ನಂಬಿಕೆ, ಸಿದ್ದಾಂತಗಳನ್ನು ಬುಡಮೇಲು ಮಾಡುವ ಯತ್ನವನ್ನು ಆಳುವ ಸರಕಾರಗಳು ಮಾಡುತ್ತಿವೆ. ಈ ಸಂದರ್ಭದಲ್ಲಿ ಪ್ರಬಲ-ಸಂಘಟಿತ ಹೋರಾಟ ಅಗತ್ಯ ಎಂದು ಅವರು ಹೇಳಿದರು.

ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಚ್. ಆರ್. ಬಸವರಾಜಪ್ಪ ಮಾತನಾಡಿ, ರೈತ ವಿರೋಧಿ ಕಾನೂನು ತಿದ್ದುಪಡಿಗಳ ವಿರುದ್ಧದ ಹೋರಾಟದ ಜೊತೆಗೆ ಸಂವಿಧಾನದ ಹಕ್ಕುಗಳನ್ನು ಬುಡಮೇಲು ಮಾಡುತ್ತಿರುವವರ ವಿರುದ್ಧ ಸಂಘಟನಾತ್ಮಕ ಹೋರಾಟ ನಡೆಸಬೇಕಿದೆ ಎಂದರು.

ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ವಿರಮಿಸಬಾರದು:ಕೆ.ಎಲ್ .ಅಶೋಕ್ 

ರೈತರ ಮಹಾ ಪಂಚಾಯತ್’ನಲ್ಲಿ ಸುಮಾರು ಐವತ್ತು ಸಾವಿರ ಜನ ಸೇರಿಸಿ ನಮ್ಮ ವಿರೋಧ ತೋರಿಸಬೇಕು. ಈಗಾಗಲೇ ನಡುಗಿರುವ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಾವು ವಿರಮಿಸಬಾರದು ಎಂದು ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ .ಅಶೋಕ್  ಅವರು ಕರೆ ನೀಡಿದರು.

ರೈತ ಚಳುವಳಿ ದೇಶವನ್ನು ಉಳಿಸುವ ಚಳುವಳಿಯಾಗಿದೆ. ಈ ಕಾರಣದಿಂದ ಉತ್ತರದ ಹೋರಾಟ ದಕ್ಷಿಣಕ್ಕೆ ಬರುತ್ತಿದೆ ಇದಕ್ಕೆ ನಾವು ಒಂದಾಗಬೇಕು ಎಂದು ಅಶೋಕ್ ಹೋರಾಟದ ಮಹತ್ವದ ಬಗ್ಗೆ ಹೇಳಿದರು. ಭಾರತದಲ್ಲಿ ಪ್ಯಾಸಿಸ್ಟರ ಸುನಾಮಿ ಆಡಳಿತ ಹಿಮ್ಮೆಟ್ಟಿಸಬೇಕಾದರೆ ವಿವಿಧ ಹೋರಾಟದ ಧಾರೆಗಳು ಒಟ್ಟಾಗಿ ನುಗ್ಗಬೇಕು ಎಂದರು.

ರೈತ ಮುಖಂಡರಾದ ಕೆ.ಟಿ ಗಂಗಾಧರ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷರಾದ ಎಸ್.ಶಿವಮೂರ್ತಿ, ಪತ್ರಕರ್ತ ಎಚ್.ಬಿ. ರಾಘವೇಂದ್ರ, ಪರಮೇಶ್ವರ್ ದೂಗೂರು, ರವಿಕುಗ್ವೆ, ಜಯಂತ್, ಚಂದ್ರಶೇಖರ್, ಮಾಜಿ ಜಿಪಂ ಸದಸ್ಯ ಹೊನಗೋಡು ರತ್ನಾಕರ್ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು.

ಎಪಿಎಂಸಿ ಸದಸ್ಯ ಭರ್ಮಪ್ಪಅಂದಾಸುರ, ಕಾಂಗ್ರೆಸ್ ಮುಖಂಡ ಬಿ.ಆರ್. ಜಯಂತ್, ಕಬಸೆ ಅಶೋಕ ಮೂರ್ತಿ, ಬಸವರಾಜಪ್ಪ ಗೌಡ,  ಗುರುಮೂರ್ತಿ, ಚಂದ್ರಶೇಖರ್ ಸಿರಿವಂತೆ, ಸುಧಾಕರ ಕುಗ್ವೆ,  ಆರೋಡಿ ಲಿಂಗರಾಜ್, ಅ.ರಾ. ಶ್ರೀನಿವಾಸ, ಚಂದ್ರಶೇಖರ್ ಗೂರಲಕೆರೆ, ಎಲ್ ಕೆ ಪುರ್ಣಿಮಾ ನವಿಲೆಮನೆ ಹೋರಾಟದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

 

Get real time updates directly on you device, subscribe now.