ದ್ವೇಷ ಪ್ರಚೋದಕ ವರದಿ: ವಿಜಯ ಕರ್ನಾಟಕ ಸಂಪಾದಕರ ವಿರುದ್ಧ ಪ್ರೆಸ್ ಕೌನ್ಸಿಲ್ ವಾರಂಟ್

ಐದು ಸಾವಿರ ರೂ. ದಂಡ ಸೇರಿದಂತೆ ಜಾಮೀನು ಸಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.

ಪ್ರೆಸ್ ಕೌನ್ಸಿಲ್ ಆದೇಶ ಪಾಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ‘ವಿಜಯ ಕರ್ನಾಟಕ’ ದೈನಿಕದ ಸಂಪಾದಕರ ವಿರುದ್ಧ ಪ್ರಚೋದನಾತ್ಮಕ ವರದಿ ಪ್ರಕರಣಕ್ಕೆ ಸಂಬಂಧಿಸಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಐದು ಸಾವಿರ ರೂ. ದಂಡ ಸೇರಿದಂತೆ ಜಾಮೀನು ಸಹಿತ ಬಂಧನ ವಾರಂಟ್ ಜಾರಿಗೊಳಿಸಿದೆ ಎಂದು ‘ಫ್ರೀ ಸ್ಪೀಚ್ ಕಲೆಕ್ಟಿವ್’ ವರದಿ ಮಾಡಿದೆ.

ಈ ಪ್ರಕರಣದಲ್ಲಿ ಜಾರಿಗೊಳಿಸಲಾದ್ದ ಸಮನ್ಸ್‌ಗೆ ದಿನಪತ್ರಿಕೆಯ ಸಂಪಾದಕರು ಹಾಜರಾಗದಿರುವ ಹಿನ್ನೆಲೆಯಲ್ಲಿ ವಾರಂಟ್ ಜಾರಿಗೊಳಿಸಲಾಗಿದ್ದು, ಪ್ರೆಸ್ ಕೌನ್ಸಿಲ್ ಆದೇಶ ಪಾಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು freespeechcollective.in ವರದಿ ತಿಳಿಸಿದೆ.

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ‘ಸತ್ತವರೆಲ್ಲ ಒಂದೇ ಸಮುದಾಯದವರು- ಈಗಲೂ ಪ್ರಾರ್ಥನೆ ಹೆಸರಲ್ಲಿ ಗುಂಪು ಸೇರುವುದೇಕೆ’ ಎಂಬ ವರದಿ ವಿರುದ್ಧ ಬೆಂಗಳೂರಿನ ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್ ಸಂಘಟನೆ ದೂರು ದಾಖಲಿಸಿತ್ತು. ನ್ಯಾಯವಾದಿ ಸಿದ್ದಾರ್ಥ್ ಕೆ ಜೆ ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್ ಪರ ದೂರು ದಾಖಲಿಸಿದ್ದರು.

ಈ ವರದಿ ಪತ್ರಿಕೋದ್ಯಮ ಸಂಹಿತೆಯನ್ನು ಉಲ್ಲಂಘಿಸಿದೆ ಎಂದಿದ್ದ ಸಂಘಟನೆ ಪತ್ರಿಕೆ ಸಾರ್ವಜನಿಕ ಕ್ಷಮೆಯಾಚನೆ ಸಲ್ಲಿಸುವಂತೆ ಆಗ್ರಹಿಸಿತ್ತು ಎಂದು ವರದಿ ವಿವರಿಸಿದೆ.

Get real time updates directly on you device, subscribe now.