ನಟ ಯಶ್ ವಿರುದ್ಧ ರೈತ ಸಂಘ ಆಕ್ರೋಶ
ಜಮೀನು ವಿವಾದಕ್ಕೆ ಸಂಬಂಧಿಸಿ ನಟ ಯಶ್ ವಿರುದ್ಧ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ನಾನು ಹಾಸನದವನೂ ಹೌದು, ಅದಕ್ಕಿಂತ ಹೆಚ್ಚಾಗಿ ಕರ್ನಾಟಕದವನೂ ಹೌದು. ಎಲ್ಲಿ ಬೇಕಾದರೂ ಜಮೀನು ಕೊಂಡುಕೊಳ್ತೀನಿ ಎಂದಿದ್ದರು ಯಶ್.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಹಾಸನ ಜಿಲ್ಲೆಯ ದುದ್ದ ಹೋಬಳಿಗೆ ಸೇರಿದ ತಿಮ್ಮಲಾಪುರ ಗ್ರಾಮದ ಜಮೀನು ವಿವಾದಕ್ಕೆ ಸಂಬಂಧಿಸಿ ನಟ ಯಶ್ ವಿರುದ್ಧ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ರೈತರಿಗಾಗಿ ಜಮೀನು ಬೇಕಾದರೂ ಬಿಟ್ಟುಕೊಡುತ್ತೇನೆ. ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳುವ ಯಶ್, ಕಂಪೌಂಡ್ ನಿರ್ಮಿಸಿ ರೈತರು ಸಂಚರಿಸುವ ದಾರಿ ಮುಚ್ಚಿದ್ದಾರೆ. ದಾರಿ ಬಿಡಲು ಒಪ್ಪದೇ ಗ್ರಾಮಸ್ಥರ ಮೇಲೆ ಬಾಡಿಗೆ ಗೂಂಡಾಗಳನ್ನು ಬಿಟ್ಟು ದೌರ್ಜನ್ಯ ಎಸಗಲು ಮುಂದಾಗಿದ್ದಾರೆ ಎಂದು ಅಣ್ಣಾಜಪ್ಪ ಆರೋಪಿಸಿದ್ದಾರೆ.
ಜಮೀನು ಗಲಾಟೆಗೆ ಸಂಬಂಧಿಸಿ ಯಶ್ ಕುಟುಂಬ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬೆನ್ನಲ್ಲೇ ರೈತ ಸಂಘ ಯಶ್ ವಿರುದ್ಧ ದೂರು ದಾಖಲಿಸಿದೆ.
ಯಶ್ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪಾ ಜಮೀನಿನಲ್ಲಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರು ಅಡ್ಡಿಪಡಿಸಿದ್ದು, ವಾಗ್ವಾದ ನಡೆದಿತ್ತು. ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದರು.
ಹಾಸನದಲ್ಲಿ ರಸ್ತೆ ವಿಷಯದಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಯಶ್ ಅವರು ನಾನು ಹಾಸನದವನೂ ಹೌದು, ಅದಕ್ಕಿಂತ ಹೆಚ್ಚಾಗಿ ಕರ್ನಾಟಕದವನೂ ಹೌದು. ಎಲ್ಲಿ ಬೇಕಾದರೂ ಜಮೀನು ಕೊಂಡುಕೊಳ್ತೀನಿ ಎಂದಿದ್ದರು.