ಡಿಎಂಕೆ ಅಧಿಕಾರಕ್ಕೆ ಬಂದರೆ ಸಿಎಎ ರದ್ಧತಿಗೆ ವಿಧಾನಸಭೆಯಲ್ಲಿ ನಿರ್ಣಯ: ಸ್ಟಾಲಿನ್
ಸಿಎಎ ವಿರೋಧಿ ಹೋರಾಟವನ್ನು ಪಕ್ಷ ಮುಂದುವರಿಸುತ್ತದೆ
ದೇಶದಲ್ಲಿನ ನಿರಾಶ್ರಿತ ತಮಿಳರಿಗೆ ಪೌರತ್ವ ನೀಡಬೇಕೆಂದು ಸ್ಟಾಲಿನ್ ಆಗ್ರಹ.
ಕರಾವಳಿ ಕರ್ನಾಟಕ ವರದಿ
ಚೆನ್ನೈ: ಡಿಎಂಕೆ ಪಕ್ಷ ಮೊದಲಿನಿಂದಲೂ ಸಿಎಎ ವಿರೋಧಿಸುತ್ತಾ ಬಂದಿದೆ. ವಿವಾದಾತ್ಮಕ ಪೌರತ್ವ ಕಾಯ್ದೆ ವಿರುದ್ಧ ತಮಿಳುನಾಡಿನಲ್ಲಿ ಒಂದು ಕೋಟಿ ಸಹಿ ಸಂಗ್ರಹಿಸುವ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿತ್ತು. ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ ಸಿಎಎ ರದ್ಧತಿಗೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಇಂದು ಹೇಳಿದ್ದಾರೆ.
ಸಿಎಎ ರದ್ಧತಿಗೆ ಕೇಂದ್ರ ಸರಕಾರವನ್ನು ಪಕ್ಷ ಒತ್ತಾಯಿಸುವುದನ್ನು ಮತ್ತು ಸಿಎಎ ವಿರೋಧಿ ಹೋರಾಟವನ್ನು ಕೂಡ ಪಕ್ಷ ಮುಂದುವರಿಸುತ್ತದೆ ಎಂದು ಸ್ಟಾಲಿನ್ ಹೇಳಿದರು.
ದೇಶದಲ್ಲಿನ ನಿರಾಶ್ರಿತ ತಮಿಳರಿಗೆ ಪೌರತ್ವ ನೀಡಬೇಕೆಂದೂ ಸ್ಟಾಲಿನ್ ಆಗ್ರಹಿಸಿದ್ದು, ಈ ಎರಡೂ ಪ್ರಮುಖ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿ ಮತ್ತೊಮ್ಮೆ ಪರಿಷ್ಕೃತ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.