ಕೋವಿಡ್ ಲಸಿಕೆ ಪಡೆದಿದ್ದ ಸಚಿವ ಪೂಜಾರಿಗೆ ಕೋವಿಡ್ ಸೋಂಕು
ಇತ್ತೀಚೆಗಷ್ಟೇ ಕೋವಿಡ್ ಲಸಿಕೆ ಪಡೆದಿದ್ದ ಪೂಜಾರಿ ಜವಾಬ್ದಾರಿಯುತ ನಾಗರಿಕರು ಕೋವಿಡ್ ಲಸಿಕೆ ಪಡೆಯಬೇಕೆಂದು ವಿನಂತಿಸಿದ್ದರು.
ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಎಲ್ಲೆಡೆ ತಿರುಗುತ್ತಾರೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವರ ವಿರುದ್ಧ ಟೀಕೆಗಳು ಕೇಳಿಬಂದಿದ್ದವು.
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕೊರೋನಾ ಸೋಂಕಿತರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
“Covid-19 Positive ಕಾರಣಕ್ಕೆ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಅನಿವಾರ್ಯವಾದರೆ ದೂರವಾಣಿ ಮೂಲಕ ಸಂಪರ್ಕಿಸಬಹುದು. ಒಂದೆರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು Covid-19 ಟೆಸ್ಟ್ ಮಾಡಿಸಿಕೊಳ್ಳಿ.” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೂಜಾರಿ ಮಾಹಿತಿ ನೀಡಿದ್ದಾರೆ.
ಗುರುವಾರ ನಳಿನ್ ಕುಮಾರ್ ಕಟೀಲ್ ಅವರ ತರವಾಡುಮನೆಯಲ್ಲಿ ನಡೆದ ನೇಮದಲ್ಲಿ ಪೂಜಾರಿಯವರು ರಾಜ್ಯ ಸರಕಾರದ ಇತರ ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಜನರೊಂದಿಗೆ ಭಾಗವಹಿಸಿದ್ದರು.
ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದ ಸಚಿವರು ಜ್ವರಪೀಡಿತರಾಗಿದ್ದರು. ಎ.9ರಂದು ಕೋವಿಡ್ ಪರೀಕ್ಷೆ ನಡೆಸಿದ್ದು, ಇಂದು ವರದಿ ಪಾಸಿಟಿವ್ ಬಂದಿದೆ.
ದ.ಕ ಉಸ್ತುವಾರಿ ಸಚಿವರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಎಲ್ಲೆಡೆ ತಿರುಗುತ್ತಾರೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವರ ವಿರುದ್ಧ ಟೀಕೆಗಳು ಕೇಳಿಬಂದಿದ್ದವು.
ಇತ್ತೀಚೆಗಷ್ಟೇ ಕೋವಿಡ್ ಲಸಿಕೆ ಪಡೆದಿದ್ದ ಪೂಜಾರಿಯವರು ದೇಶದೆಲ್ಲೆಡೆ ಕೋವಿಡ್ ಲಸಿಕೆ ಅಭಿಯಾನ ನಡೆಯುತ್ತಿದೆ. ಜವಾಬ್ದಾರಿಯುತ ನಾಗರಿಕರು ಕೋವಿಡ್ ಲಸಿಕೆ ಪಡೆಯಬೇಕೆಂದು ವಿನಂತಿಸಿದ್ದರು.