ದೆಹಲಿಯಲ್ಲಿ ಪಾಳೆಗಾರ, ಕರ್ನಾಟಕದಲ್ಲೊಬ್ಬ ಮಾಂಡಲಿಕ: ಸಿದ್ಧರಾಮಯ್ಯ ವ್ಯಂಗ್ಯ

ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ?  

ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ.  

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ನಗರಗಳಲ್ಲಿ ರಾತ್ರಿ ಕರ್ಪ್ಯೂ ಹೇರಲು ಕೈಗೊಂಡಿರುವ ಕ್ರಮ, ಕೊರೊನಾ ಓಡಿಸಲು ತಟ್ಟೆ ಬಡಿಯಲು ಪ್ರಧಾನಿ  ನರೇಂದ್ರ ಮೋದಿಯವರು ನೀಡಿದ್ದ ಕರೆಯಷ್ಟೇ  ಬಾಲಿಷ ಕ್ರಮ. ದೆಹಲಿಯಲ್ಲೊಬ್ಬರು ಪಾಳೆಯಗಾರ, ಕರ್ನಾಟಕದಲ್ಲೊಬ್ಬರು ಮಾಂಡಲಿಕ, ಭಲೇ  ಜೋಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

ರಾತ್ರಿ ತೆರೆದಿರುವ ಹೊಟೇಲ್, ಚಿತ್ರಮಂದಿರ ಮತ್ತು ಅಂಗಡಿಮುಂಗಟ್ಟುಗಳನ್ನು ಮುಚ್ಚಿದರೆ ಸಾಲದೇ?  ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ?  ಎಂದು ಅವರು ಪ್ರಶ್ನಿಸಿದ್ದಾರೆ.

ಕೊರೊನಾ ನಿಯಂತ್ರಿಸುವ ಪ್ರಾಮಾಣಿಕ ಇಚ್ಛೆ ಮುಖ್ಯಮಂತ್ರಿಗಳು ಹೊಂದಿದ್ದರೆ, ಮೊದಲು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು, ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು, ಸೋಂಕಿತರಿಗೆ ತಕ್ಷಣ ಚಿಕಿತ್ಸೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸಿದ್ಧರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಕೋವಿಡ್ ವ್ಯಾಕ್ಸಿನ್ ಪ್ರಾರಂಭಿಸಿ 80 ದಿನಗಳು ಕಳೆದರೂ ಕೇವಲ ಶೇಕಡಾ ಒಂದರಷ್ಟು ಜನಸಂಖ್ಯೆಗೆ ಮಾತ್ರ ನೀಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈಗಾಗಲೇ ವ್ಯಾಕ್ಸಿನ್ ಕೊರತೆಯ ದೂರು ಕೇಳಿಬರತೊಡಗಿದೆ. ಗಿಮಿಕ್‌ಗಳನ್ನು ಬಿಟ್ಟು ಈ ಕಡೆ ಗಮನಹರಿಸಿ ಎಂದು ಆಗ್ರಹಿಸಿದ್ದು, ದೇಶದ ಪ್ರಧಾನಿಯ ಅಂಧಾ ದರ್ಬಾರ್‌ನಿಂದ ರಾಜ್ಯದ ಮುಖ್ಯಮಂತ್ರಿಗಳು ಸ್ಪೂರ್ತಿ ಪಡೆದರೆ, ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ.  ಮುಖ್ಯಮಂತ್ರಿಗಳೇ, ನೀವು ಸ್ವಲ್ಪ ಬುದ್ದಿ ಕಲಿಯಿರಿ, ಅವರಿಗೂ ಸ್ವಲ್ಪ‌ ಬುದ್ದಿ ಹೇಳಿ ಎಂದು ಸಿದ್ದರಾಮಯ್ಯ ಟೀಕಾಪ್ರಹಾರಗೈದಿದ್ದಾರೆ.

Get real time updates directly on you device, subscribe now.