ನಾಡ ಗ್ರಾಮದಲ್ಲಿ ಲಾಕ್ ಡೌನ್ ನೆಪದಲ್ಲಿ ಗಂಗೊಳ್ಳಿ ಪೊಲೀಸರ ಅಟ್ಟಹಾಸ

ಇತ್ತೀಚೆಗೆ ತ್ರಾಸಿ ಪೆಟ್ರೋಲ್ ಬಂಕ್ ಬಳಿ ಕೂಡ ಗಂಗೊಳ್ಳಿ  ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ‘ದೆಹಲಿ ಹೈಕೋರ್ಟ್ ಆದೇಶವಿದೆ ಎಂದು ಬೆದರಿಸಿ ಮಾಸ್ಕ್ ದಂಡ ವಸೂಲಿ ಮಾಡಿದ್ದರು.

ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಒಂದು ಗಂಟೆ ಸಮಯ ಬಾಕಿ ಇರುವಾಗಲೇ ಗಂಗೊಳ್ಳಿ ಪೊಲೀಸರಿಂದ ವಾಹನಗಳನ್ನು ಅಡ್ಡಗಟ್ಟಿ ಕೀಲಿಕೈಗಳನ್ನು ಸೆಳೆದುಕೊಳ್ಳುವ ಕಾರ್ಯಾಚರಣೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸಮಯ ಬೆಳಿಗ್ಗೆ 9ಗಂಟೆ. ಜನರಿಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಇನ್ನೂ ಒಂದು ಗಂಟೆ ಸಮಯ ಬಾಕಿ ಇರುವಾಗಲೇ ಗಂಗೊಳ್ಳಿ ಪೊಲೀಸರಿಂದ ವಾಹನಗಳನ್ನು ಅಡ್ಡಗಟ್ಟಿ ಕೀಲಿಕೈಗಳನ್ನು ಸೆಳೆದುಕೊಳ್ಳುವ ಕಾರ್ಯಾಚರಣೆ ಸೋಮವಾರ ಬೆಳಿಗ್ಗೆ ನಾಡ ಗ್ರಾಮದ ಗುಡ್ಡೆಅಂಗಡಿ ಪಂಚಾಯತ್ ಬಳಿ ನಡೆಯಿತು.

ಸ್ಥಳೀಯ ವೈದ್ಯರ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬಂದವರು, ಔಷಧ ಅಂಗಡಿಗೆ ಬಂದವರು, ಬ್ಯಾಂಕ್ ಆಫ್ ಬರೋಡಾ ಎಟಿಎಂ ಕೇಂದ್ರಕ್ಕೆ ಬಂದು ಹಣವಿಲ್ಲದೇ ಮರಳುತ್ತಿದ್ದವರು, ದಿನಸಿ ಅಂಗಡಿಗೆ ತೆರಳುತ್ತಿದ್ದವರು, ಅವರಿವರೆನ್ನದೇ ಕಾರು, ಬೈಕುಗಳನ್ನು ಅಡ್ಡಗಟ್ಟಿ ಕೀಲಿಕೈಗಳನ್ನು ಬಲವಂತವಾಗಿ ಸೆಳೆದುಕೊಳ್ಳಲು ಮುಂದಾಗುವ ದೃಶ್ಯ, ಪೊಲೀಸರು ದಂಡದ ರಸೀದಿಗಳನ್ನು ಹರಿಯುವ ದೃಶ್ಯ ನಾಗರಿಕರನ್ನು ಬೆಚ್ಚಿಬೀಳಿಸಿತು.

ಕಾರಿನಲ್ಲಿ ಬಂದ ನಾಗರಿಕರನ್ನು ಪೊಲೀಸ್ ಪೇದೆಯೋರ್ವರು ನೀವೆಲ್ಲ ನಡೆದುಕೊಂಡು ಹೋಗಲಾಗುವುದಿಲ್ಲವೆ ಎಂದು ತಾಕೀತು ಮಾಡುತ್ತಿರುವುದು, ಕಾರಿನಲ್ಲಿ ಇನ್ನೂ ನಾಲ್ಕು ಜನ ಹಾಕಿ ತಿರುಗಿ ಎಂದು ವ್ಯಂಗ್ಯವಾಡುತ್ತಿದ್ದು, ಜನರಿಗೆ ಮಾತಾಡಲೂ ಬಿಡದೇ ವಾಹನಗಳ ಕೀಲಿಕೈ ಸೆಳೆದು ವಾಹನಗಳನ್ನು ವಶಪಡಿಸಿಕೊಂಡಿದ್ದು, ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.

ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಸರಕಾರವೇ ಜನರಿಗೆ ಸಮಯಾವಕಾಶ ನೀಡಿದಾಗಲೂ ಗಂಗೊಳ್ಳಿ ಪೊಲೀಸರ ದಿಢೀರ್ ಕಾರ್ಯಾಚರಣೆ ಕಾನೂನು ಬಾಹಿರವಲ್ಲವೆ ಎಂಬ ಆತಂಕಕ್ಕೂ ಕಾರಣವಾಗಿದೆ.

ಈ ರೀತಿ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು ಸಂಜೆ ವೇಳೆಗೆ ಠಾಣೆಗೆ ಬರಲು ಹೇಳಿದ್ದು, ಅವರಲ್ಲಿ ಕೆಲವರಿಗೆ ವಾಹನಗಳನ್ನು ಹಿಂದಿರುಗಿಸಿಲ್ಲ. ವಾಹನಗಳನ್ನು ಮರಳಿ ನೀಡದೇ ಇರುವುದಕ್ಕೆ ಯಾವುದೇ ಕಾರಣವನ್ನೂ ನೀಡಿಲ್ಲ.

ಇತ್ತೀಚೆಗೆ ತ್ರಾಸಿ ಪೆಟ್ರೋಲ್ ಬಂಕ್ ಬಳಿ ಕೂಡ ಇದೇ ರೀತಿ ಗಂಗೊಳ್ಳಿ  ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ‘ದೆಹಲಿ ಹೈಕೋರ್ಟ್ ಆದೇಶವಿದೆ ಎಂದು ಬೆದರಿಸಿ ಮಾಸ್ಕ್ ದಂಡ ವಸೂಲಿ ಮಾಡಿದ್ದರು. ಈ ಬಗ್ಗೆ ಪ್ರಶ್ನಿಸಿದ ನಾಗರಿಕರೋರ್ವರಲ್ಲಿ ತಮಗೆ ಮಾಸ್ಕ್ ದಂಡ ಸಂಗ್ರಹಿಸುವಂತೆ ಟಾರ್ಗೆಟ್ ನೀಡಲಾಗಿದೆ. ದಂಡ ಸಂಗ್ರಹಿಸಿ ಸಂಗ್ರಹಿಸಿ ದಣಿದಿದ್ದೇವೆ ಎಂದೂ ಮಾಸ್ಕ್ ಅನ್ನು ಮೂಗಿನ ಕೆಳಗೆ ಧರಿಸಿದ್ದ ಅಧಿಕಾರಿಯೋರ್ವರು ತಮ್ಮ ಅಸಹಾಯಕತೆ ಹೇಳಿಕೊಂಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆಗೆ ಒಳಗಾಗಿತ್ತು.

ಆ ಘಟನೆ ಮರೆಯುವ ಮುನ್ನವೇ ಗಂಗೊಳ್ಳಿ ಪೊಲೀಸರು ವಾಹನಗಳನ್ನು ಸೀಝ್ ಮಾಡುವುದು, ಮಾಸ್ಕ್ ದಂಡ ಎಂದು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬರುವ ಜನರಿಗೆ ರಶೀದಿ ಹರಿಯುವುದು ಇತ್ಯಾದಿ ಕ್ರಮಗಳಿಂದ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಸೀಝ್ ಮಾಡಿರುವ ವಾಹನಗಳನ್ನು ಪಡೆಯಲು ಮಧ್ಯಾಹ್ನ ಬನ್ನಿ, ಸಂಜೆ ಬನ್ನಿ ಎಂದು ಕರೆಯುವುದು. ವಾಹನಗಳನ್ನು ಪಡೆಯಲು ಹೋದ ನಾಗರಿಕರಿಗೆ ವಾಹನಗಳನ್ನು ಹಿಂದಿರುಗಿಸದೇ ಸತಾಯಿಸಿ ನಾಳೆ ಬನ್ನಿ ಎನ್ನುವುದು, ಕೆಲವರಿಗೆ ಕಾರಣವೇ ಹೇಳದೇ ಕಳಿಸುವುದು ಇವೆಲ್ಲ ಗಂಗೊಳ್ಳಿ ಪೊಲೀಸರ ಕಾರ್ಯಾಚರಣೆ ಬಗ್ಗೆ ಭಾರೀ ಅನುಮಾನಕ್ಕೆ ಕಾರಣವಾಗಿವೆ.

ಕೋವಿಡ್ ಲಾಕ್ ಡೌನ್ ಸಂದರ್ಭ ಗ್ರಾಮೀಣ ಜನತೆ ಉದ್ಯೋಗವಿಲ್ಲದೇ, ಆದಾಯ ಮೂಲಗಳಿಲ್ಲದೇ ತತ್ತರಿಸಿರುವಾಗ ಗಂಗೊಳ್ಲಿ ಪೊಲೀಸರು ಗಾಯದ ಮೇಲೆ ಬರೆ ಎಳೆದಂತೆ ಸಮಯದ ಪರಿವೆ ಇಲ್ಲದೇ ಕಾರ್ಯಾಚರಣೆ ನಡೆಸಿ ಏನು ಮಾಡಲು ಹೊರಟಿದ್ದಾರೆ ಎಂದು ಜನ ಮಾತಾಡುತ್ತಿದ್ದಾರೆ.

ಇದೇ ರೀತಿ ಪೊಲೀಸ್ ದೌರ್ಜನ್ಯ ಮುಂದುವರಿದರೆ ಜನರು ಪ್ರತಿಭಟನೆ ಕೈಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ.

ಚಿತ್ರ: ಸಾಂದರ್ಭಿಕ

Get real time updates directly on you device, subscribe now.