ಕ್ಷಿಪ್ರ ಕಾರ್ಯಾಚರಣೆ. ಅಜೇಂದ್ರ ಶೆಟ್ಟಿ ಕೊಲೆ ಆರೋಪಿ ಅನೂಪ್ ಶೆಟ್ಟಿ ಪೊಲೀಸ್ ವಶಕ್ಕೆ

ವ್ಯವಹಾರ ಮತ್ತು ಇತ್ತೀಚೆಗೆ ಖರೀದಿಸಿದ ಹೊಂಡಾ ಸಿಟಿ ಕಾರು ಇತ್ಯಾದಿಗಳ ಬಗ್ಗೆ ಅಜೇಂದ್ರ ಅವರ ಜೊತೆ ಅನೂಪ್‌ಗೆ ತಕರಾರು ಇತ್ತು ಎಂದು ಅಜೇಂದ್ರ ಅವರ ಸಹೋದರ ಪೊಲೀಸರಿಗೆ ತಿಳಿಸಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಯಡಾಡಿ ಮತ್ಯಾಡಿ ಗ್ರಾಮದ ಕೂಡಲು ನಿವಾಸಿ ಜಗನ್ನಾಥ ಶೆಟ್ಟಿ ಅವರ ಮಗ, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿ ಅನೂಪ್ ಶೆಟ್ಟಿಯನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ರಾತ್ರಿ ಅಜೇಂದ್ರ ಅವರಮ್ಮು ಭೀಕರವಾಗಿ ಕೊಲೆ ಮಾಡಲಾಗಿತ್ತು. ಕುಂದಾಪುರ ತಾಲೂಕಿನ ಕಾಳಾವರದಲ್ಲಿ ಡ್ರೀಮ್ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದ ಅಜೇಂದ್ರ ಅವರನ್ನು ಅವರ ಕಛೇರಿಯಲ್ಲೇ ಹತ್ಯೆ ಮಾಡಲಾಗಿತ್ತು. ಅಜೇಂದ್ರ ಅವರ ವ್ಯವಹಾರದ ಪಾಲುದಾರ ಆ ರಾತ್ರಿ ಕಛೇರಿಯಲ್ಲಿ ಅಜೇಂದ್ರ ಅವರ ಜೊತೆ 9 ಗಂಟೆಯ ತನಕ ಇದ್ದುದನ್ನು ಸ್ಥಳೀಯರು ಖಚಿತಪಡಿಸಿದ್ದರು. ಬಳಿಕ ಅನೂಪ್ ಶೆಟ್ಟಿಯ ಬೈಕ್ ಕಛೇರಿ ಹೊರಗೆ ಪತ್ತೆಯಾಗಿತ್ತು. ಅಜೇಂದ್ರ ಅವರ ಹೊಂಡಾ ಸಿಟಿ ಕಾರು ನಾಪತ್ತೆಯಾಗಿತ್ತು ಮತ್ತು ಅನೂಪ್ ಶೆಟ್ಟಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಪೊಲೀಸರ ಅನುಮಾನ ಅನೂಪ್ ಶೆಟ್ಟಿಯ ಮೇಲಿತ್ತು.

ವ್ಯವಹಾರ ಮತ್ತು ಇತ್ತೀಚೆಗೆ ಖರೀದಿಸಿದ ಹೊಂಡಾ ಸಿಟಿ ಕಾರು ಇತ್ಯಾದಿಗಳ ಬಗ್ಗೆ ಅಜೇಂದ್ರ ಅವರ ಜೊತೆ ಅನೂಪ್‌ಗೆ ತಕರಾರು ಇತ್ತು ಎಂದು ಅಜೇಂದ್ರ ಅವರ ಸಹೋದರ ಪೊಲೀಸರಿಗೆ ತಿಳಿಸಿದ್ದರು. ಅನೂಪ್ ಶೆಟ್ಟಿಯ ಬೆನ್ನು ಹಿಡಿದ ಪೊಲೀಸರು ಗೋವಾದಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆಗೆ ನಿಖರ ಕಾರಣಗಳು ಪೊಲೀಸರ ವಿಚಾರಣೆಯ ವೇಳೆ ಬಹಿರಂಗಕ್ಕೆ ಬರುವ ಸಾಧ್ಯತೆ ಇದೆ. ಅಜೇಂದ್ರ ಅವರ ಬರ್ಬರ ಹತ್ಯೆ ಕುಂದಾಪುರ ಪರಿಸರದ ಜನರನ್ನು ಬೆಚ್ಚಿ ಬೀಳಿಸಿದ್ದು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Get real time updates directly on you device, subscribe now.