ಕೊರಗ ದೌರ್ಜನ್ಯ ಪ್ರಕರಣ: ಹಲ್ಲೆಗೊಳಗಾದವರಿಗೆ ಪರಿಹಾರ. ಪ್ರಕರಣ ಸಿಒಡಿಗೆ. ನ್ಯಾಯ ಮರೀಚಿಕೆ?
ದೌರ್ಜನ್ಯದ ವೇಳೆ ಹಲ್ಲೆಗೊಳಗಾದ ಕೊರಗ ಕುಟುಂಬದ ಸದಸ್ಯರಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಚಿವರು
ಮೆಹಂದಿ ಕಾರ್ಯಕ್ರಮದ ವೇಳೆ ಕೊರಗ ಕುಟುಂಬದ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಘೋಷಿಸಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಕೋಟ: ಉಡುಪಿ ಜಿಲ್ಲೆಯ ಕೋಟದಲ್ಲಿ ಮೆಹಂದಿ ಕಾರ್ಯಕ್ರಮದ ವೇಳೆ ಕೊರಗ ಕುಟುಂಬದ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಘೋಷಿಸಿದ್ದಾರೆ. ಈ ದೌರ್ಜನ್ಯದಲ್ಲಿ ಪೊಲೀಸರಿಂದ ಹಲ್ಲೆಗೆ ಒಳಗಾದ ಮದುಮಗ ರಾಜೇಶ್ ಸೇರಿದಂತೆ ಅವರ ಕುಟುಂಬದ ಆರು ಸದಸ್ಯರಿಗೆ ಸರ್ಕಾರ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು ಮೊದಲ ಕಂತು 50 ಸಾವಿರ ರೂಪಾಯಿಯನ್ನು ಗೃಹ ಸಚಿವರು ಸಂತ್ರಸ್ತರಿಗೆ ಹಸ್ತಾಂತರಿಸಿದ್ದಾರೆ.
ಇಂದು ಬೆಳಿಗ್ಗೆ ಕೋಟಕ್ಕೆ ಆಗಮಿಸಿ ಸಂತ್ರಸ್ತ ರಾಜೇಶ್ ಮನೆಗೆ ಭೇಟಿ ನೀಡಿದ ಗೃಹ ಸಚಿವರು ‘ಕೊರಗ ಕುಟುಂಬದ ಮೇಲೆ ನಡೆದ ಹಲ್ಲೆ ಅಮಾನವೀಯ. ಬಳಿಕ ಪೊಲೀಸರು ದಾಖಲಿಸಿದ ಪ್ರತಿ ದೂರು ಇನ್ನೂ ಅಮಾನವೀಯ. ಪೊಲೀಸರು ದಾಖಲಿಸಿದ ಪ್ರತಿ ದೂರು ಸುಳ್ಳು ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಈ ಪ್ರತಿ ದೂರಿನ ಬಳಿಕ ದಾಖಲಾಗಿರುವ ಮೊಕದ್ದಮೆಯಿಂದ ರಾಜೇಶ್ ಮತ್ತು ಕುಟುಂಬಕ್ಕೆ ಹಾಗೂ ದೂರಿನಲ್ಲಿ ಉಲ್ಲೇಖಿಸಲಾಗಿರುವ ಇತರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಆ ಕುರಿತು ಯಾರಿಗೂ ಭಯಬೇಡ ಎಂದು ಭರವಸೆ ಇತ್ತರು.
‘ಎರಡೂ ಪ್ರಕರಣಗಳನ್ನು ಸಿಒಡಿಗೆ ವಹಿಸಲಾಗುತ್ತದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವಾರದ ಒಳಗೆ ಕೊರಗರ ಮೇಲಿರುವ ದೂರುಗಳನ್ನು ಹಿಂಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕೋಟ ಪಿಎಸ್‌ಐ ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿರದ ಕಾರಣ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗೆ ತಿಳಿದಿರಲಿಲ್ಲ. ಈ ಎಲ್ಲದರ ಕುರಿತು ತನಿಖೆ ನಡೆಸಲಾಗುತ್ತದೆ’ ಎಂದು ಗೃಹ ಸಚಿವರು ಹೇಳಿದರು.
ದೌರ್ಜನ್ಯ ಎಸಗಿದ ಎಸ್‌ಐ ಅನ್ನು ಮಾತ್ರ ಅಮಾನತು ಮಾಡಲಾಗಿದೆ. ಉಳಿದ ಸಿಬ್ಬಂದಿಗಳನ್ನು ಬೇರೆ ಠಾಣೆಗೆ ಸ್ಥಳಾಂತರಗೊಳಿಸಿದ್ದಾರೆ. ಅವರ ಂಏಲೆ ಕ್ರಮ ಯಾಕಿಲ್ಲ ಎಂದು ಸ್ಥಳೀಯ ಹೋರಾಟಗಾರರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದೌರ್ಜನ್ಯದ ವೇಳೆ ಹಲ್ಲೆಗೊಳಗಾದ ಕೊರಗ ಕುಟುಂಬದ ಸದಸ್ಯರಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಚಿವರು ಮೊದಲ ಕಂತು 50 ಸಾವಿರವನ್ನು ಚೆಕ್ ಮೂಲಕ ನೀಡಿದರು. ರಾಜೇಶ್ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕೊರಗರ ನೋವಿಗೆ ಸ್ಪಂದಿಸಲು ಸರ್ಕಾರವೇ ಮನೆ ಬಾಗಿಲಿಗೆ ಬಂದಿದೆ. ಕೊರಗರು ಯಾವುದೇ ರೀತಿಯಲ್ಲೂ ಭಯಪಡುವುದು ಬೇಡ ಎಂದು ನುಡಿದರು.
ಮದುಮಗ ರಾಜೇಶ್, ಅವರ ಕುಟುಂಬದ ಸ್ತ್ರೀಯರು, ಕೊರಗ ಮುಖಂಡ ಗಣೇಶ ಬಾರ್ಕೂರು ಮುಂತಾದವರು ಕೊರಗ ಕುಟುಂಬಕ್ಕೆ ಬದುಕುವ ಹಕ್ಕಿಲ್ಲವೆ ಎಂದು ಪ್ರಶ್ನಿಸಿದರು. ಕೊರಗ ಮುಖಂಡ ಗಣೇಶ ಕೊರಗ, ಮಾನವ ಹಕ್ಕು ಕಾರ್ಯಕರ್ತ ದಿನೇಶ್ ಗಾಣಿಗ, ನ್ಯಾಯವಾದಿ ಪ್ರಮೋಡ್ ಹಂದೆ ಮುಂತಾದವರು ಗೃಹ ಸಚಿವರಿಗೆ ದೌರ್ಜನ್ಯದ ಕುರಿತು ಮಾತನಾಡಿದರು.
ಮೆಹಂಡಿಯಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದು ಮಾತ್ರವಲ್ಲದೆ ಈಗ ಸುಳ್ಳು ಪ್ರತಿದೂರಿನ ಮೂಲಕ ದಾಖಲಾದ ಪ್ರಕರಣವನ್ನೂ ಎದುರಿಸಬೇಕಾಗಿರುವ ಕೊರಗ ಕುಟುಂಬಕ್ಕೆ ಕೇವಲ ಹಣಕಾಸಿನ ಪರಿಹಾರ ನೀಡುವ ಮೂಲಕ ಗೃಹ ಸಚಿವರು ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂಬ ಆರೋಪಗಳು ಈಗ ಕೇಳಿಬರುತ್ತಿವೆ.
ಕೊರಗರ ಮೇಲೆ ದಾಖಲಾದ ಸುಳ್ಳು ಕೇಸನ್ನು ತಕ್ಷಣವೇ ಹಿಂದೆಗೆಯುವ ಭರವಸೆ ನೀಡಬೇಕಾದ ಗೃಹ ಸಚಿವರು ಆ ಕೆಲಸ ಮಾಡದೆ ಹಾರಿಕೆಯ ಮಾತುಗಳನ್ನು ಹೇಳಿ ಜಾರಿಕೊಂಡಿದ್ದಾರೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದು ಸುಳ್ಳು ಪ್ರಕರಣದಿಂದ ಕೊರಗ ಸಮುದಾಯದ ರಾಜೇಶ್ ಮನೆಮಂದಿ ಮತ್ತು ಸ್ನೇಹಿತರು ಅನುಭವಿಸಬೇಕಾದ ಕಷ್ಟಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ಪರಿಹಾರದ ಮೊದಲ ಕಂತನ್ನು ಪಡೆದ ರಾಜೇಶ್ ಕುಟುಂಬಕ್ಕೆ ಪರಿಹಾರದ ಮೊದಲ ಕಂತು ಮಾತ್ರ ಸಿಕ್ಕಿ ನ್ಯಾಯ ಮರೀಚಿಕೆಯಾಗಿಯೇ ಉಳಿಯುವುದೇ ಎಂಬ ಅನುಮಾನ ಈಗ ಕಾಡತೊಡಗಿದೆ.