ಫೇಕ್ ಮೆಸೇಜ್‌ಗಳಿಗೆ ಕಡಿವಾಣ: ಫಾರ್ವರ್ಡ್ ಸಂದೇಶ ಒಬ್ಬರಿಗೆ ಮಿತಿಗೊಳಿಸಿದ ವಾಟ್ಸ್ಯಾಪ್

ಸುಳ್ಳು ಸಂದೇಶಗಳು, ತಪ್ಪು ಮಾಹಿತಿ ಹಾಗೂ ಕೋಮು ಪ್ರಚೋದಕ ಮೆಸೇಜ್‌ಗಳಿಂದ ರೋಸಿ ಹೋಗಿರುವ ವಾಟ್ಸ್ಯಾಪ್ ಫಾರ್ವರ್ಡ್ ಸಂದೇಶಗಳಿಗೆ ಕಡಿವಾಣ ಹಾಕಿದೆ.

ಕಿಡಿಗೇಡಿಗಳು ಕೊರೋನಾ ಸಂಕಷ್ತದ ಸಂದರ್ಭದಲ್ಲಿ ಫಾರ್ವರ್ಡ್ ಮಾಡುತ್ತಿರುವ ಸುಳ್ಳು ಸಂದೇಶಗಳು, ತಪ್ಪು ಮಾಹಿತಿ ಹಾಗೂ ಕೋಮು ಪ್ರಚೋದಕ ಮೆಸೇಜ್‌ಗಳಿಂದ ರೋಸಿ ಹೋಗಿರುವ ವಾಟ್ಸ್ಯಾಪ್ ಫಾರ್ವರ್ಡ್ ಸಂದೇಶಗಳಿಗೆ ಕಡಿವಾಣ ಹಾಕಿದೆ. ಹೆಚ್ಚು ಬಾರಿ ಫಾರ್ವರ್ಡ್ ಆದ ಸಂದೇಶ ನಿಮ್ಮ ವಾಟ್ಸ್ಯಾಪ್‌ಗೆ ಬಂದರೆ ನಿವು ಅದನ್ನು ನಿಮ್ಮ ಒಂದು ಕಾಂಟ್ಯಾಕ್ಟ್‌ಗೆ ಮಾತ್ರ ಫಾರ್ವರ್ಡ್ ಮಾಡುವಂತೆ ವಾಟ್ಸ್ಯಾಪ್ ಮಿತಿ ಹೇರಿದೆ.

ಈ ಹಿಂದೆ ವಾಟ್ಸ್ಯಾಪ್‌ಗೆ ಬಂದ ಸಂದೇಶಗಳನ್ನು ಐದು ಕಾಂಟ್ಯಾಕ್ಟ್‌ಗಳಿಗೆ ಕಳುಹಿಸುವಂತೆ ಕಳೆದ ವರ್ಷ ಮಿತಿ ಹೇರಲಾಗಿತ್ತು. ಆದರೆ ಇದೀಗ ವಾಟ್ಸ್ಯಾಪ್ ಈ ಮಿತಿಯನ್ನು ಒಂದಕ್ಕೆ ಇಳಿಸಿದೆ. ಈ ಮಿತಿ ಈ ಹಿಂದೆ ಐದು ಜನರಿಗೆ ತಲುಪಿ ಬಳಿಕ ನಿಮಗೆ ಬಂದ ಸಂದೇಶಗಳಿಗೆ ಮಾತ್ರ ಅನ್ವಯವಾಗಲಿದ್ದು ಈ ಸಂದೇಶಗಳ ಜೊತೆ ಎರಡು ಬಾಣಗಳ ಚಿಹ್ನೆ ಇರುತ್ತದೆ. ನೀವೆ ರಚಿಸಿ ಕಳುಹಿಸುವ ನಿಮ್ಮ ವೈಯಕ್ತಿಕ ಸಂದೇಶವನ್ನು ಈಗಲೂ ಐದು ಜನರಿಗೆ ಕಳುಹಿಸಬಹುದಾಗಿದ್ದು ಫಾರ್ವರ್ಡ್ ಸಂದೇಶ ಒಬ್ಬರಿಗೆ ಮಾತ್ರ ನೀವು ಫಾರ್ವರ್ಡ್ ಮಾಡಬಹುದು.

ಕೊರೋನಾ ವಿರುದ್ಧ ಜಾಗತಿಕ ಸಮರಕ್ಕೆ ಅಪಾರ ಪ್ರಮಾಣದ ಧನ ಸಹಾಯ ನೀಡಿರುವ ವಾಟ್ಸ್ಯಾಪ್ ಬಹು ದೊಡ್ಡ ಮಟ್ಟದಲ್ಲಿ ಜಾಗೃತಿಯನ್ನೂ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಇದೇ ವೇಳೆ ಕೊರೋನಾ ಕುರಿತ ತಪ್ಪು ಮಾಹಿತಿಯ ಸಂದೇಶಗಳು, ಭೀತಿ ಹುಟ್ಟಿಸುವ ಮತ್ತು ಪ್ರಚೋದನಕಾರಿಯಾಗಿರುವ ಸಂದೇಶಗಳಿಂದ ರೋಸಿ ಹೋಗಿರುವ ಕಂಪೆನಿಯು ಸದ್ಯ ಅದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದೆ.

Get real time updates directly on you device, subscribe now.