ಕೊರೋನಾ ಭೀತಿಯಿಂದ ತಾಯಿಯನ್ನು ಮನೆ ಸೇರಿಸಿಕೊಳ್ಳದೇ ಗೇಟಿಗೆ ಬೀಗ ಜಡಿದರು

ತನ್ನ ಮಗಳು ಗರ್ಭಿಣಿಯಾಗಿದ್ದು, ತಾಯಿಯಿಂದ ಕೊರೋನಾ ಸೋಂಕು ಆಕೆಗೆ ಹಬ್ಬಬಹುದೆಂದು ಮಗ ವಾದಿಸಿದ್ದಾನೆ.

ಕರಾವಳಿ ಕರ್ನಾಟಕ ವರದಿ
ಕರೀಂ ನಗರ: ಕೊರೋನಾ ವೈರಸ್ ಹಿರಿಯ ನಾಗರಿಕರಲ್ಲಿ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅವರನ್ನು ಸುರಕ್ಷಿತವಾಗಿ ಇರಿಸುವ ಅಗತ್ಯತೆ ಇದೆ ಎಂದು ವೈದ್ಯರು ಹೇಳುತ್ತಿದ್ದರೆ, ಸಹೋದರರಿಬ್ಬರೂ ತಮ್ಮ ವಯೋವೃದ್ಧ ತಾಯಿಯನ್ನು ಮನೆ ಒಳಗೆ ಸೇರಿಸದೆ ಅಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.

ತೆಲಂಗಾಣದ ಕರೀಂ ನಗರದಲ್ಲಿ ಕಿಸಾನ್ ನಗರ ಎಂಬಲ್ಲಿ ಈ ಘಟನೆ ವರದಿಯಾಗಿದೆ. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶೋಲಾಪುರಕ್ಕೆ ತೆರಳಿದ್ದ ಎಂಬತ್ತು ವರ್ಷದ ವೃದ್ಧೆಯನ್ನು ಪುತ್ರರಿಬ್ಬರು ಮನೆ ಒಳಗೆ ಹೋಗಲು ಬಿಡಲಿಲ್ಲ.

ಶೋಲಾಪುರದಿಂದ ಹೈದರಾಬಾದ್‌ಗೆ ಕಾರಿನಲ್ಲಿ ಬಂದಿದ್ದ ಅಜ್ಜಿ ಅಲ್ಲಿಂದ ಬಸ್ಸಿನಲ್ಲಿ ಬಂದಿದ್ದರು. ಈ ಸಂದರ್ಭ ಗಡಿಯಲ್ಲಿ ಅಜ್ಜಿ ಕೈಗೆ ಅಧಿಕಾರಿಗಳು ಕ್ವಾರಂಟೈನ್ ಸೀಲ್ ಹಾಕಿದ್ದರು. ಇದನ್ನು ನೋಡಿದ ಪುತ್ರ ಗಾಬರಿಯಾಗಿದ್ದಾನೆ. ಆತನ ತಮ್ಮ ಕೂಡ ಗಾಬರಿಯಾಗಿದ್ದಾನೆ.

ಮನೆಯ ಗೇಟ್ ಹೊರಗೇ ತಾಯಿಯನ್ನು ಇರಲು ಹೇಳಿ ಗೇಟಿಗೆ ಬೀಗ ಜಡಿದಿದ್ದಾರೆ ಪುತ್ರರು. ಅಜ್ಜಿಯ ದುರವಸ್ಥೆ ತಿಳಿದ ಸ್ಥಳಿಯ ಕಾರ್ಪೋರೇಟರ್ ಮನೆ ಬಂದು ಕಾರಣ ವಿಚಾರಿಸಿದಾಗ ತನ್ನ ಮಗಳು ಗರ್ಭಿಣಿಯಾಗಿದ್ದು, ತಾಯಿಯಿಂದ ಕೊರೋನಾ ಸೋಂಕು ಆಕೆಗೆ ಹಬ್ಬಬಹುದೆಂದು ಮಗ ವಾದಿಸಿದ್ದಾನೆ. ಆತನ ಮನ ಒಲಿಸಿ, ಆತನ ಭೀತಿ ತೊಲಗಿಸುವಂಥ ಧೈರ್ಯ ತುಂಬುವ ಮಾತುಗಳನ್ನಾಡಿ ಕಾರ್ಪೋರೇಟರ್ ಅಜ್ಜಿಯನ್ನು ಮನೆಯ ಒಳಗೆ ಸುರಕ್ಷಿತ ಕೋಣೆಗೆ ಸೇರಿಸಿದ್ದಾರೆ.

Get real time updates directly on you device, subscribe now.