ಮೇಲ್ವರ್ಗದ ಮಹಿಳಾ ಪೊಲೀಸ್ ಸಿಬಂದಿ ಪ್ರೀತಿಸಿದ ಯುವಕನ ಸಜೀವ ದಹನ

ಯುವತಿ ಪೊಲೀಸ್ ಇಲಾಖೆಯಲ್ಲಿ ಕೆಲಸ ದೊರೆತ ಬಳಿಕ ಯುವಕನಿಂದ ದೂರ ಆಗಿದ್ದರು.

ಕೊಲೆಯಾದ ಯುವಕನ ತಂದೆ ಪೊಲೀಸರಿಗೆ ರಾತ್ರಿಯೇ ಮೊರೆ ಹೋದರೂ ಪೊಲೀಸರು ಬೆಳಿಗ್ಗೆ ನೋಡೋಣ ಎಂದು ಅವರನ್ನು ಸಾಗಹಾಕಿದ್ದರು.

ಕರಾವಳಿ ಕರ್ನಾಟಕ ವರದಿ
ಲಕ್ನೊ: ಹಿಂದುಳಿದ ಪಟೇಲ್ ಸಮುದಾಯದ ಯುವಕನೋರ್ವ ಮಹಿಳಾ ಪೊಲೀಸ್ ಓರ್ವರೊಂದಿಗೆ ಹೊಂದಿದ್ದ ಆಪ್ತ ಸಂಬಂಧ  ಮುಂದುವರಿಸಲು ಯತ್ನಿಸಿದ ಕಾರಣಕ್ಕೆ ರೊಚ್ಚಿಗೆದ್ದ ಮೇಲ್ವರ್ಗದ ರಜಪೂತ್ ಸಮುದಾಯದ ಜನರು ಆತನನ್ನು ಮರಕ್ಕೆ ಕಟ್ಟಿ ಸಜೀವ ದಹಿಸಿದ ಘಟನೆ ಪ್ರತಾಪ್‌ಗಢದಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಅಂಬಿಕಾ ಪ್ರಸಾದ್ ಪಟೇಲ್(25)ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಮಹಿಳಾ ಪೊಲೀಸ್ ಸಿಬಂದಿಯ ಸಂಬಂಧಿಕರನ್ನೊಳಗೊಂಡು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಾಪ್‌ಗಢ್ ಜಿಲ್ಲೆಯ ಫತಾನ್‌ಪುರ ಠಾಣಾ ವ್ಯಾಪ್ತಿಯ ಭುಜೈನಿ ಗ್ರಾಮದಲ್ಲಿ ಯುವಕನನ್ನು ದಹಿಸಿದ ಈ ಬರ್ಬರ ಘಟನೆ ನಡೆದಿದೆ. ಯುವನಕೆ ಗನ್ ತೋರಿಸಿ ಬೆದರಿಸಿ ಮನೆಯಿಂದ ಎಳೆದೊಯ್ದ ಗುಂಪು ಮಾವಿನ ಮರಕ್ಕೆ ಆತನನ್ನು ಕಟ್ಟಿ ಪೆಟ್ರೋಲ್ ಎರಚಿ ಬೆಂಕಿ ಇಕ್ಕಿ ಆತನನ್ನು ಸಜೀವ ದಹಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ಬಗ್ಗೆ ಪಟೇಲ್ ಕುಟುಂಬದವರ ವಿರುದ್ಧ,  ಗ್ರಾಮಸ್ಥರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಅಭಿಷೇಕ್ ಸಿಂಗ್ ವಿವರ ನೀಡಿದ್ದಾರೆ.

ಅಂಬಿಕಾ ಪ್ರಸಾದ್ ಪಟೇಲ್ ಪೊಲೀಸ್ ಸಿಬಂದಿಯಾದ ತನ್ನ ಪುತ್ರಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಸಭ್ಯ ಫೋಟೋಗಳನ್ನು ಹಾಕಿದ್ದಾನೆ ಎಂದು ಪೊಲೀಸ್ ಸಿಬಂದಿಯ ತಂದೆ ಪೊಲೀಸರಿಗೆ ದೂರಿದ್ದು, ಸೂಕ್ತ ಕಾಯ್ದೆಯನ್ವಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಯುವತಿ ಪೊಲೀಸ್ ಅಧಿಕಾರಿಯಾಗುವ ಮುಂಚೆ ಯುವಕನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ದೊರೆತ ಬಳಿಕ ಯುವಕನಿಂದ ದೂರ ಆಗಿದ್ದರು. ಆಕೆಯ ಪ್ರೀತಿ ಮರೆಯದ ಯುವಕ ತಾನು ಆಕೆಯೊಂದಿಗಿದ್ದ ಆಪ್ತ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ತನ್ನ ಆಪ್ತರಿಗೆ ರವಾನಿಸಿದ ಸಂಗತಿ ಯುವತಿಯ ಕಡೆಯವರಿಗೆ ತಿಳಿದುಬಂದಿತ್ತು. ಈ ಬಗ್ಗೆ ಯುವಕನ ವಿರುದ್ಧ ಪೊಲೀಸ್ ದೂರು ದಾಖಲಾದ ಬಳಿಕ ಆತ ಸೆರೆಮನೆಯಲ್ಲಿದ್ದ.

ಎಪ್ರಿಲ್ ತಿಂಗಳಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ನೀಡಲಾಗಿದ್ದು, ಆತನ ಮೇಲೆ ದ್ವೇಷ ಹೊಂದಿದ್ದ ಯುವತಿ ಕಡೆಯವರು ಆತನನ್ನು ಬರ್ಬರವಾಗಿ ಕೊಲೆಗೈದಿದ್ದಾರೆ.

ಕೊಲೆಯಾದ ಯುವಕನ ತಂದೆ ಪೊಲೀಸರಿಗೆ ರಾತ್ರಿಯೇ ಮೊರೆ ಹೋದರೂ ಪೊಲೀಸರು ಬೆಳಿಗ್ಗೆ ನೋಡೋಣ ಎಂದು ಅವರನ್ನು ಸಾಗಹಾಕಿದ್ದರು. ಬೆಳಗಿನ ಜಾವ ಐದಕ್ಕೆ ಯುವಕನ ತಂದೆಗೆ ಮಗನನ್ನು ಸಜೀವ ದಹಿಸಿದ ಸಂಗತಿ ತಿಳಿದುಬಂದಿದೆ. ವಿಷಯ ತಿಳಿದು ರೊಚ್ಚಿಗೆದ್ದ ಗ್ರಾಮಸ್ಥರು ಎರಡು ಪೊಲೀಸ್ ವಾಹನ ಸುಟ್ಟು ಹಾಕಿದ್ದಾರೆ. ಗ್ರಾಮಕ್ಕೆ ಅರೆಸೇನಾ ಪಡೆಗಳನ್ನು ಕಳಿಸಲಾಗಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

 

 

Get real time updates directly on you device, subscribe now.