ಉಡುಪಿ ರಂಗ ಮಾಹಿತಿ ಪುಸ್ತಕ ಒಂದು ಪುಸ್ತಕ ಹೇಗಿರಬಾರದು ಎಂಬುದಕ್ಕೆ ಉದಾಹರಣೆ: ವಸಂತ ಬನ್ನಾಡಿ
ಕುಂದಾಪುರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದ ಎಚ್.ಎನ್..ನಕ್ಕತ್ತಾಯ ಮತ್ತು ಬಾಲಕೃಷ್ಣ ಪೈ ಬಗ್ಗೆ ಯಾಕೆ ಒಂದು ಚಿಕ್ಕ ಮಾಹಿತಿಯೂ ಇಲ್ಲ.
ಇಲ್ಲಿ ಬಹಳಷ್ಟು ಕೆಲಸ ಮಾಡಿದ ಸುರೇಶ ಆನಗಳ್ಳಿ ಮತ್ತು ಗೋಪಾಲಕೃಷ್ಣ ನಾಯರಿ ಬಗ್ಗೆ ಒಂದು ಕನಿಷ್ಠ ಮಾಹಿತಿಯೂ ಏಕೆ ಇಲ್ಲ?
ಕರ್ನಾಟಕ ನಾಟಕ ಅಕಾಡೆಮಿ ತಂದಿರುವ ಉಡುಪಿ ಜಿಲ್ಲಾ ರಂಗ ಮಾಹಿತಿ ಎಂಬ ಅಸಮಗ್ರ ಮತ್ತು ಅಸಮರ್ಪಕ ಕೈಪಿಡಿಯ ಕುರಿತು ವಸಂತ ಬನ್ನಾಡಿ.
………………………………………………………
ಉಡುಪಿ ಜಿಲ್ಲೆಯ ರಂಗಭೂಮಿಯ ಬಗ್ಗೆ ನಾಟಕ ಅಕಾಡೆಮಿ ಬಿಡುಗಡೆ ಮಾಡಿರುವ ಪಿಡಿಎಫ್ ನೋಡಿದೆ. ಇಂಥಾ ಜವಾಬ್ದಾರಿಯುತ ಕೆಲಸವನ್ನು ಕೈಗೆತ್ತಿಕೊಳ್ಳುವುದು ಅಷ್ಟು ಸುಲಭವಲ್ಲ. ನಾಟಕ ಅಕಾಡೆಮಿ ತುರಾತುರಿಯಲ್ಲಿ ಅಂತಹ ಕೆಲಸವನ್ನು ಮಾಡಲೂ ಬಾರದು.
ಈಗ ಹೊರಬಂದಿರುವ ಉಡುಪಿ ರಂಗ ಮಾಹಿತಿ ಪುಸ್ತಕ ಒಂದು ಪುಸ್ತಕ ಹೇಗಿರಬಾರದು ಎಂಬುದಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಯಾವ ಪೂರ್ವಯೋಜನೆ, ಸಿದ್ಧತೆ ಯೋಚನೆಯಿಲ್ಲದೆ ಸಂಪಾದಿಸಿರುವುದರಿಂದ ಇದೊಂದು ಅಸಮಗ್ರ,ಅಸಮರ್ಪಕ ರಂಗ ಮಾಹಿತಿ ಪುಸ್ತಕವಾಗಿದೆ.
ಈ ಪುಸ್ತಕವನ್ನು ಸಂಯೋಜಿಸಿರುವವರು ಶ್ರೀಮತಿ ಪದ್ಮಾ ಕೊಡಗು ಎಂದೂ ಅವರಿಗೆ ನೆರವಾದವರು ಬಾಸುಮ ಕೊಡಗು ಎಂದೂ ಪುಸ್ತಕದಲ್ಲಿ ಕಾಣಿಸಲಾಗಿದೆ. ಆದರೆ ತಾವು ಕಲೆಹಾಕಿರುವ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಮುಂದಿಡುವಲ್ಲಿ ಸಂಯೋಜಕರು ಎಡವಿರುವಿದು ಮೇಲ್ನೋಟಕ್ಕೇ ಸ್ಪಷ್ಟವಿದೆ.
ಬಾಸುಮ ಕೊಡಗು ಈ ಪುಸ್ತಕಕ್ಕೆ ಸಂಬಂಧಿಸಿ ಮಾಹಿತಿಗಾಗಿ ನನ್ನ ಹತ್ತಿರ ಒಂದೆರಡು ಸಲ ಫೋನ್ ಮಾಡಿದ್ದರು.ಪುಸ್ತಕ ಹೊರತರಲು ಸಮಯ ಕಡಿಮೆ ಇರುವುದಾಗಿಯೂ ಹೇಳಿಕೊಂಡಿದ್ದರು.ಈಗ ಬಂದಿರುವ ಪುಸ್ತಕದಲ್ಲಿ ಸಿಕ್ಕಿದ ಮಾಹಿತಿಗಳನ್ನೂ ಲೇಖನಗಳನ್ನೂ ಒಂದು ಕನಿಷ್ಠ ಶಿಸ್ತೂ ಇಲ್ಲದೆ ಖುಷಿ ಬಂದ ಹಾಗೆ ಪ್ರಕಟಿಸಿರುವುದನ್ನು ನೋಡಿದರೆ ಇಂತಹ ಪುಸ್ತಕವೊಂದನ್ನು ತರುವ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಏಳುತ್ತದೆ.ಬೇಕಾದ ಮಾಹಿತಿ ಸಿಗದಿರುವುದರಿಂದ ಸಿಕ್ಕಿದ್ದನ್ನಷ್ಟೇ ಪ್ರಕಟಿಸುವುದು ಒಬ್ಬ ಜವಾಬ್ದಾರಿಯುತ ಸಂಪಾದಕರ ಲಕ್ಷಣವಲ್ಲ .
ಈ ಪುಸ್ತಕ ಹೇಗೆ ಅಸಮರ್ಪಕವಾಗಿದೆ ಎಂಬುದರ ಬಗ್ಗೆ ಒಂದೆರಡು ಉದಾಹರಣೆಗಳನ್ನಷ್ಟೇ ಇಲ್ಲಿ ಕೊಡಬಯಸುತ್ತೇನೆ.ಈ ಪುಸ್ತಕದಲ್ಲಿ ಈ ಹಿಂದೆ ಪ್ರಕಟವಾಗಿರುವ ಬಿ..ವಿ.ಕಾರಂತರ ಬಗೆಗಿನ ಒಂದು ದೀರ್ಘ ಲೇಖನವನ್ನು ಮರು ಮುದ್ರಿಸಲಾಗಿದೆ .ಕಾರಂತರು ಉಡುಪಿ ಜಿಲ್ಲೆಯವರು ಅಲ್ಲದಿದ್ದರೂ ಇಲ್ಲಿಯೂ ಕೆಲಸ ಮಾಡಿದವರು.ಸರಿ.ಆದರೆ ಇಲ್ಲಿನವರೇ ಆಗಿದ್ದು ಇಲ್ಲಿ ಬಹಳಷ್ಟು ಕೆಲಸ ಮಾಡಿದ ಸುರೇಶ ಆನಗಳ್ಳಿ ಮತ್ತು ಗೋಪಾಲಕೃಷ್ಣ ನಾಯರಿ ಬಗ್ಗೆ ಒಂದು ಕನಿಷ್ಠ ಮಾಹಿತಿಯೂ ಏಕೆ ಇಲ್ಲ?
ಕೆಮ್ತೂರರ ಬಗ್ಗೆಯೂ ಒಂದು ದೀರ್ಘ ಲೇಖನ ಪುಸ್ತಕದಲ್ಲಿದೆ.ಆದರೆ ಅದೇ ತಲೆಮಾರಿನವರಾಗಿದ್ದು ಕುಂದಾಪುರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದ ಎಚ್.ಎನ್..ನಕ್ಕತ್ತಾಯ ಮತ್ತು ಬಾಲಕೃಷ್ಣ ಪೈ ಬಗ್ಗೆ ಯಾಕೆ ಒಂದು ಚಿಕ್ಕ ಮಾಹಿತಿಯೂ ಇಲ್ಲ. ಬಹುಶಃ ಸಂಯೋಜಕರಿಗೆ ಅವರು ಯಾರು ಎಂಬುದು ತಿಳಿದಿಲ್ಲ.
ರಾಮದಾಸರ ಬಗ್ಗೆ ಒಂದು ಲೇಖನ ಇದೆ. ಬಿ.ಆರ್ .ನಾಗೇಶ್ ಯಾಕೆ ನೆನಪಿಗೂ ಬಂದಿಲ್ಲ.
ಉಡುಪಿ ಜಿಲ್ಲೆಯಲ್ಲಿರುವ ಹಲವಾರು ನಾಟಕ ಸಂಸ್ಥೆಗಳ ಬಗ್ಗೆ ಮತ್ತು ಅವುಗಳು ಮಾಡಿರುವ ಕೆಲಸದ ಬಗ್ಗೆ ಈ ಪುಸ್ತಕದಲ್ಲಿ ಬಹಳಷ್ಟು ಮಾಹಿತಿಯಿದೆ.ಆದರೆ ಕುಂದಾಪುರದ ನಾಟಕ ಶಾಲೆಯಾದ ರಂಗ ಅಧ್ಯಯನ ಕೇಂದ್ರದ ಬಗ್ಗೆ ಯಾಕೆ ಲೇಖನ ಬರೆಸಿಲ್ಲ? ಇದು ತಮ್ಮ ಹೊಣೆಗಾರಿಕೆ ಎಂದು ಯಾಕೆ ಸಂಯೋಜಕರಿಗೆ ಹೊಳೆಯಲಿಲ್ಲ?
ಮೇಲಿನವು ಕೆಲವೇ ಉದಾಹರಣೆಗಳು ಮಾತ್ರ. ಉಡುಪಿಯಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳ ಬಗ್ಗೆ ಅನೇಕರಿಂದ ಲೇಖನ ಬರೆಸಲಾಗಿದೆ.ಇದು ಪುನರಾವರ್ತನೆಗೆ ಕಾರಣವಾಗಿರುವುದು ಎದ್ದು ತೋರುವಂತಿದೆ.ತಂಡಗಳ ಬಗೆಗಿನ ಲೇಖನಗಳಂತೂ ಕೊಟ್ಟದ್ದನ್ನು ಹಾಗೆ ಮುದ್ರಿಸಿದ ಹಾಗೆ ತೋರುತ್ತದೆ.
ಕುಂದಾಪರದ ರಂಗ ಚಟುವಟಿಕೆಗಳ ಬಗಿನ ನಿರ್ಲಕ್ಷ್ಯ ಎದ್ದು ಕಾಣುವಂತಿದೆ. ಕೂರಾಡಿ ಸೀತಾರಾಮ ಶೆಟ್ಟಿ, ರಾಮಕೃಷ್ಣ ಹೇಳೆ೯, ಜಿ.ಕೆ.ಐತಾಳ್ ಜಯಪ್ರಕಾಶ್ ಮಾವಿನಕುಳಿ,ಜಿ.ವಿ.ಕಾರಂತ ಮುಂತಾಗಿ ಯಾರೂ ಸಂಯೋಜಕರ ಕಣ್ಣಿಗೆ ಬಿದ್ದಿಲ್ಲ.
ಮುಖ್ಯವಾಗಿ ಸಂಯೋಜಕರಿಗೆ ಉಡುಪಿ ರಂಗಭೂಮಿಯ ಬಗ್ಗೆ ಏನೇನೂ ಗೊತ್ತೇ ಇಲ್ಲ ಎನ್ನುವುದು ಸ್ಪಷ್ಟ. ಆದರೆ ತಮ್ಮ ಬಗ್ಗೆ ತಾವು ಬರೆದುಕೊಳ್ಳಲು ಅವರು ಮರೆತಿಲ್ಲ.
ಕಲೆಹಾಕಿದ ಮಾಹಿತಿಗಳನ್ನು ಒಂದು ಗೊತ್ತಾದ ಕ್ರಮ ಅನುಸರಿಸದೆ,ರೀತಿ ನೀತಿಯಿಲ್ಲದೆ ಯದ್ವಾತದ್ವಾ ಅಚ್ಚು ಹಾಕುವುದು ಪುಸ್ತಕ ಸಂಪಾದನೆಯ ಕ್ರಮವಲ್ಲ.
ಎಲ್ಲ ಮಾಹಿತಿಗಳನ್ನು ಎದುರಿಗಿಟ್ಟುಕೊಂಡು ಪರಿಷ್ಕರಿಸಬೇಕಾದ್ದು ಮತ್ತು ಪುನರಾವರ್ತನೆ ಆಗದ ಹಾಗೆ, ಮುಖ್ಯ ಮಾಹಿತಿಗಳು ಬಿಟ್ಟು ಹೋಗದ ಹಾಗೆ ಎಚ್ಚರ ವಹಿಸಬೇಕಾದ್ದು ಬಹಳ ಮುಖ್ಯ. ಒಂದು ಸಮಿತಿಯನ್ನು ರಚಿಸಿಕೊಂಡು ಈ ಕೆಲಸ ಮಾಡಬೇಕಾಗುತ್ತದೆ.ಅಂತಹ ಯಾವ ಕೆಲಸವೂ ಆಗಿಲ್ಲ ಎನ್ನುವುದು ಈ ಪುಸ್ತಕ ನೋಡಿದಾಗ ಸ್ಪಷ್ಟವಾಗುತ್ತದೆ.
ಉಳಿದ ಜಿಲ್ಲೆಗಳ ಕುರಿತ ರಂಗಮಾಹಿತಿ ಪುಸ್ತಕಗಳು ಹೇಗೆ ಬಂದಿದೆಯೋ ನನಗೆ ಗೊತ್ತಿಲ್ಲ. ಉಡುಪಿ ಜಿಲ್ಲೆ ಬಗ್ಗೆ ಪ್ರಕಟವಾಗಿರುವುದಂತೂ ಅತ್ಯಂತ ಕಳಪೆ ಪುಸ್ತಕ.
ಮುಂದಿನ ದಿನಗಳಲ್ಲಾದರೂ ನಾಟಕ ಅಕಾಡೆಮಿ ರಂಗಭೂಮಿ ಬಗ್ಗೆ ಪುಸ್ತಕ ಪ್ರಕಟಿಸುವಾಗ ಇಂತಹ ಬೇಜವಾಬ್ದಾರಿತನವನ್ನು ತೋರಿಸಬಾರದು ಎಂದು ಒತ್ತಾಯಿಸುತ್ತಿದ್ದೇನೆ.