ಕೊರೊನಾ ಭೀತಿಯಲ್ಲಿ ಊರಿಗೆ ಬರುವವರನ್ನು ತಡೆಯುವ ಅಗತ್ಯವಿಲ್ಲ: ಡಾ. ಶ್ರೀನಿವಾಸ ಕಕ್ಕಿಲಾಯ
ಕೊರೊನಾ ಸೋಂಕು ಶೇ 99 ಜನರಲ್ಲಿ ಯಾವ ಸಮಸ್ಯೆಯನ್ನೂ ಮಾಡದೆ ನಾಲ್ಕೈದು ದಿನಗಳ ಕೆಮ್ಮು-ನೆಗಡಿಯಾಗಿ ಹಾಗೆಯೇ ಹೋಗಲಿದೆ.
ಸೋಂಕಿನ ಭಯದಲ್ಲಿ ಮನುಷ್ಯರನ್ನೇ ದೂರವಿಟ್ಟು, ಮನುಷ್ಯತ್ವವನ್ನೇ ಕೊಲ್ಲುವುದು ಬೇಡ.
ಕೊರೊನಾ ಹರಡುವುದು ನಿರೀಕ್ಷಿತವೇ. ಅದಕ್ಕೆ ಯಾರು ಯಾರನ್ನೋ ದೂಷಿಸುವುದಿನ್ನು ಸಾಕು; ಅದರಿಂದ ದೂಷಿಸುವವರಿಗೇ ತೊಂದರೆ, ಅವರ ದೇಹಕ್ಕೂ, ಮನಸ್ಸಿಗೂ ಕೆಡುಕು, ಅದಲ್ಲದೆ ಬೇರೇನೂ ಪ್ರಯೋಜನವಾಗದು.
ಬೇರೆಯವರು ಎಲ್ಲೆಲ್ಲಿದ್ದಾರೋ, ತಿಂಗಳುಗಳಿಂದ ತಮ್ಮ ಮನೆಯವರಿಂದ, ಹೆತ್ತವರಿಂದ ಬೇರ್ಪಟ್ಟಿದ್ದಾರೋ, ಎಷ್ಟು ಕಷ್ಟದಲ್ಲಿದ್ದಾರೋ, ಅಲ್ಲಲ್ಲೇ, ಹಾಗೆಯೇ ಇರಲಿ, ತನ್ನೂರಿಗೆ ಮಾತ್ರ ಅವರು ಬರುವುದು ಬೇಡ, ತನಗೆ ಕೊರೊನಾ ತಗಲುವುದು ಬೇಡ ಎಂದು ಆಶಿಸುವುದು ತೀರಾ ಅಮಾನವೀಯ, ಮಾತ್ರವಲ್ಲ, ಅದರಿಂದ ಕೊರೊನಾ ತಗಲದಂತೆ ತಡೆಯುವುದಕ್ಕೂ ಸಾಧ್ಯವಿಲ್ಲ; ಏಕೆಂದರೆ ಕೊರೊನಾ ಈಗಾಗಲೇ ಎಲ್ಲ ಊರುಗಳ ಬಳಿಗೆ ಬಂದಾಗಿದೆ, ಹೊಸದಾಗಿ ಯಾರೂ ಮತ್ತೆ ಹೊತ್ತು ತರಬೇಕಾಗಿಲ್ಲ.
ಕೊರೊನಾ ಬಂದಿದೆ, ಹಲವರಿಗೆ ಸೋಂಕಲಿದೆ, ಅವರಲ್ಲಿ ಶೇ 99 ಜನರಲ್ಲಿ ಯಾವ ಸಮಸ್ಯೆಯನ್ನೂ ಮಾಡದೆ ನಾಲ್ಕೈದು ದಿನಗಳ ಕೆಮ್ಮು-ನೆಗಡಿಯಾಗಿ ಹಾಗೆಯೇ ಹೋಗಲಿದೆ. ತೊಂದರೆಯಾಗಬಲ್ಲ ಆ 1% ಮಂದಿಯನ್ನೂ ಈಗಲೇ ಸುರಕ್ಷಿತವಾಗಿಟ್ಟರೆ ಅವರನ್ನೂ ಕಾಪಾಡಲು ಸಾಧ್ಯವಿದೆ; ಅದನ್ನು ಎಲ್ಲರೂ ಮಾಡೋಣ. ಇಂತಹದೊಂದು ಸೋಂಕಿನ ಭಯದಲ್ಲಿ ಮನುಷ್ಯರನ್ನೇ ದೂರವಿಟ್ಟು, ಮನುಷ್ಯತ್ವವನ್ನೇ ಕೊಲ್ಲುವುದು ಬೇಡ.
ಹಿರಿಯರನ್ನೂ, ಅದಾಗಲೇ ಕಾಯಿಲೆಗಳುಳ್ಳವರನ್ನೂ ಪ್ರತ್ಯೇಕಿಸಿ
60ಕ್ಕೆ ಮೇಲ್ಪಟ್ಟವರು ಮತ್ತು ದೀರ್ಘಕಾಲೀನ ಕಾಯಿಲೆಗಳಿರುವವರು ಗಂಭೀರ ಸಮಸ್ಯೆಗಳಿಗೀಡಾಗುವ ಸಾಧ್ಯತೆ ಹೆಚ್ಚು, ಅವರನ್ನು ಪ್ರತ್ಯೇಕಿಸಿ ರಕ್ಷಿಸಿಡಬೇಕು ಎನ್ನುವುದನ್ನು ಮಾರ್ಚ್ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ದೇಶದಲ್ಲಿ ಸುಮಾರು 200ರಷ್ಟು ಕೊರೊನಾ ಸಂಬಂಧಿತ ಸಾವುಗಳಾಗಿದ್ದಾಗಲೇ, ವಿದೇಶಗಳಲ್ಲಾಗಿದ್ದ ಸಾವುಗಳ ವರದಿಗಳೊಂದಿಗೆ ಅವನ್ನು ಹೋಲಿಸಿ, ಅಲ್ಲೆಲ್ಲ ಆಗಿದ್ದಂತೆಯೇ ಇಲ್ಲೂ ಆಗುತ್ತಿದೆ ಎಂಬ ವಿಶ್ಲೇಷಣೆಯನ್ನು ಕೂಡ ಬರೆದಿದ್ದೆ.
ಈ ಅಧ್ಯಯನವೂ ಕೂಡ ಅವೆಲ್ಲವನ್ನೂ ಮತ್ತೆ ದೃಢಪಡಿಸಿದೆ. ನಮ್ಮಲ್ಲಿ ಮಕ್ಕಳು ಮತ್ತು ಯುವಕರ ಸಂಖ್ಯೆ ಅತಿ ಹೆಚ್ಚು; 60ಕ್ಕಿಂತ ಕೆಳಗಿನವರು ಜನಸಂಖ್ಯೆಯ ಶೇ.93ರಷ್ಟು, ಅಂದರೆ 127 ಕೋಟಿ ಇದ್ದಾರೆ. ಕೊರೊನಾ ಎಲ್ಲರನ್ನೂ ಸೋಂಕುವುದರಿಂದಾಗಿ ಸಹಜವಾಗಿಯೇ ಸೋಂಕುಗಳು ಕಿರಿಯರಲ್ಲೇ ಹೆಚ್ಚಿರುತ್ತವೆ. ಆದರೆ ಹಿರಿಯರು ಸೋಂಕಿನಿಂದ ಸಮಸ್ಯೆಗೀಡಾಗಿ ಆಸ್ಪತ್ರೆಗಳಿಗೆ ದಾಖಲಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಮತ್ತು ಅಂಥವರಲ್ಲಿ ಸೋಂಕಿನ ಪರೀಕ್ಷೆಗಳನ್ನು ಮಾಡುವ ಸಾಧ್ಯತೆಗಳೂ ಹೆಚ್ಚಿರುವುದರಿಂದ, ಅವರು ಜನಸಂಖ್ಯೆಯ ಶೇ.7ರಷ್ಟೇ ಇದ್ದರೂ, ಸೋಂಕಿತರ ಸಂಖ್ಯೆಯಲ್ಲಿ ಶೇ.18-20ರಷ್ಟಿರುತ್ತಾರೆ. ಚೀನಾದ ವರದಿಗಳೊಂದಿಗೆ ಹೋಲಿಸಿ ಇದನ್ನೂ ಅಂದೇ ಬರೆದಿದ್ದೇನೆ. ಇಂದಿನ ವರದಿಯಲ್ಲಿ 60ಕ್ಕಿಂತ ಮೇಲ್ಪಟ್ಟ ಸೋಂಕಿತರ ಪ್ರಮಾಣವು 18.1ರಷ್ಟಿರುವುದಕ್ಕೂ ಅದೇ ಕಾರಣವನ್ನು ನೀಡಬಹುದು.
ಕೊರೊನಾ ತಗಲುವುದನ್ನು ತಡೆಯಲು ಕಷ್ಟ, ಇಂದಲ್ಲ ನಾಳೆ ಅದು ಎಲ್ಲರಿಗೂ ತಗಲುವ ಸಾಧ್ಯತೆಗಳಿವೆ. ಆದರೆ ಈಗ ಎಲ್ಲರಿಗೂ ಒಟ್ಟಿಗೇ ತಗಲಿದರೆ, ಅದರಲ್ಲಿ ಶೇ. 20ರಷ್ಟು ಸೋಂಕು ಹಿರಿಯರಲ್ಲೂ, ಇತರ ಸಮಸ್ಯೆಗಳುಳ್ಳವರಲ್ಲೂ ಆದರೆ, ಅವರಲ್ಲಿ ಶೇ.20- 30ರಷ್ಟು ಗಂಭೀರ ಸಮಸ್ಯೆಗಳಿಗೀಡಾದರೆ, ಅವರಲ್ಲಿ 30%ಕ್ಕೆ ಕೃತಕ ಉಸಿರಾಟ ಬೇಕಾದರೆ ಅವನ್ನೆಲ್ಲ ನಿಭಾಯಿಸುವ ಸಾಮರ್ಥ್ಯ ನಮ್ಮಲ್ಲಿ (ಶ್ರೀಮಂತ ದೇಶಗಳಲ್ಲೂ) ಇಲ್ಲ ಎನ್ನುವ ಕಾರಣಕ್ಕೆ ಹಲವರು ಸಾವನ್ನಪ್ಪುತ್ತಾರೆ. ಆದ್ದರಿಂದ ಕಿರಿಯರನ್ನೂ, ಮಕ್ಕಳನ್ನೂ ಮನೆಯೊಳಗೆ ಹಿರಿಯರೊಂದಿಗೆ ಕೂಡಿಟ್ಟರೆ ಹಿರಿಯರನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯವಿಲ್ಲ. ಎಲ್ಲರನ್ನೂ ವರ್ಷಗಟ್ಟಲೆ ಹಾಗೆ ಮನೆಯೊಳಗೇ ಬಂಧಿಸಿಡುವುದಕ್ಕೆ ಸಾಧ್ಯವೂ ಇಲ್ಲ. ಕಿರಿಯರು ತರಕಾರಿ, ದಿನಸಿ ತರಲು ಹೊರಹೋದರೂ ಸೋಂಕಿತರಾಗಬಹುದು, ಮನೆಯಲ್ಲಿ ಹಿರಿಯರು ಜೊತೆಗಿದ್ದರೆ ಅವರಿಗೂ ತಗಲಬಹುದು. ಇದೇ ಕಾರಣಕ್ಕೆ ಹಿರಿಯರನ್ನೂ, ಅದಾಗಲೇ ಕಾಯಿಲೆಗಳುಳ್ಳವರನ್ನೂ ಪ್ರತ್ಯೇಕಿಸಿ, ಸುರಕ್ಷಿತವಾಗಿರಿಸುವುದೊಂದೇ ಕೊರೊನಾದಿಂದಾಗುವ ಸಾವುಗಳನ್ನು ತಡೆಯಲು ಇರುವ ಉಪಾಯ.