ಕರ್ನಾಟಕ ಚುನಾವಣೆ: ಇವಿಎಂ ಹ್ಯಾಕ್ ಆಗುತ್ತದೆಂದು ಪ್ರಧಾನಿಗೆ ಮೊದಲೆ ಗೊತ್ತಿತ್ತೆ?
ರಾಮಕೃಷ್ಣ ಕುಲಾಲ್ ಮಂಗಳೂರು ಅವರಿಂದ ಓದುಗರ ಪತ್ರ
ಪ್ರತಿಪಕ್ಷಗಳ ನೇತಾರರಲ್ಲಿ ಯಾವೊಬ್ಬನೂ ಹೇಳದಿರುವ ಮಾತನ್ನು ಮೋದಿಯವರು ಯಾಕೆ ಅವರ ಬಾಯಿಯಲ್ಲಿ ಹಾಕುವ ಪ್ರಯತ್ನ ಮಾಡಿದರು?
ಮಾನ್ಯರೇ,
ಕರ್ನಾಟಕದ ಚುನಾವಣೆಯ ಪ್ರಚಾರ ಕಾಲದಲ್ಲಿ ಕಾಂಗ್ರೆಸ್ಸ್, ಬಿಜೆಪಿ, ಅಥವಾ ಜೆಡಿಎಸ್ ಪಕ್ಷಗಳ ಯಾವೊಬ್ಬ ನೇತಾರನೂ ಇವಿಎಂ ಹ್ಯಾಕ್ ಆಗುವ ಸಾಧ್ಯತೆಯ ಬಗ್ಗೆ ಬಾಯಿ ತಪ್ಪಿಯೂ ಆರೋಪ ಮಾಡಿರಲಿಲ್ಲ. ಆದರೂ ಚುನಾವಣೆಗೆ ಒಂದು ವಾರ ಮುಂಚೆ ಅಂದರೆ ಮೇ 5 ಕ್ಕೆ ಕೇವಲ ಪ್ರಧಾನಿ ಮೋದಿಯವರು ಮಾತ್ರ ತನ್ನ ಮಂಗಳೂರಿನ ಸಭೆಯಲ್ಲಿ ಇವಿಎಂ ಹ್ಯಾಕ್ ವಿಷಯ ಪ್ರಸ್ತಾಪಿಸಿದ್ದರು. ಹಾಗಾದರೆ ಇವಿಎಂ ವಿಚಾರವನ್ನು ಪ್ರಧಾನಿಯವರು ಖುದ್ದು ಪ್ರಸ್ತಾಪಿಸಿದ್ದರ ಮರ್ಮವೇನು?
ಮೋದಿ ಇವಿಎಂ ವಿಚಾರವಾಗಿ ಮಂಗಳೂರಿನ ಸಭೆಯಲ್ಲಿ ಅಂದು ಮಾತನಾಡಿದ್ದು ಹಲವು ಅರ್ಥಗಳಿಗೆ ಕಾರಣವಾಗಿತ್ತು. ಆದರೆ ಆಗ ಹೆಚ್ಚಿನವರು ಈ ವಿಷಯ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮತ ಎಣಿಕೆ ಮುಗಿದು ಫಲಿತಾಂಶ ಬಂದ ನಂತರ ಮೋದಿ ಆ ದಿನ ಬಾಯಿ ತಪ್ಪಿ ಹೇಳಿದ್ದ ಮಾತಿನ ನಿಜ ಅರ್ಥ ಜನರಿಗೆ ಆಗಿದ್ದು.
ಮತದಾನದ ದಿನ ಘೋಷಣೆಯಾದ ಮೇಲೆ ಇತರ ಪಕ್ಷಗಳ್ಯಾವವೂ ಇವಿಎಂ ಪ್ರಸ್ತಾಪ ಮಾಡಿರಲಿಲ್ಲ. ಹಾಗೂ ಬಿಜೆಪಿ ಇವಿಎಂ ತಿರುಚಬಹುದು ಎನ್ನುವ ಅನುಮಾನ ಯಾವ ಪಕ್ಷವೂ ಎತ್ತಿರಲಿಲ್ಲ. ಹಾಗಿದ್ದರೂ ಕಾಂಗ್ರೆಸ್ಸ್ ತನ್ನ ಸೋಲಿಗೆ ಇವಿಎಂ ಮೇಲೆ ಅನುಮಾನ ವ್ಯಕ್ತ ಪಡಿಸುತ್ತದೆ ಎನ್ನುವ ಮಾತು ಆ ಹಂತದಲ್ಲಿ ಮೋದಿ ಯಾಕೆ ಹೇಳಿದ್ದರು? ಚುನಾವಣೆಯಲ್ಲಿ ಗೆದ್ದು ಸರಕಾರ ರಚಿಸುವ ಬಗ್ಗೆ ಮಾತ್ರ ಪ್ರಧಾನಿ ಹೇಳಿದ್ದರೆ ಅದು ಎಂದಿನ ಆತ್ಮವಿಶ್ವಾಸ ಎಂದು ಹೇಳಬಹುದಿತ್ತು, ಆತ್ಮ ವಿಶ್ವಾಸ ಬಿಂಬಿಸುವ ಮಾತು ಹೇಳುವುದು ಬೇರೆ ವಿಚಾರ, ಆದರೆ ವಿರುದ್ಧ ಪಕ್ಷದವರು ತಮ್ಮ ಸೋಲನ್ನು ಇವಿಎಂ ತಿರುಚುವಿಕೆ ಮೇಲೆ ಆರೋಪಿಸುತ್ತಾರೆ ಎಂದು ಮತದಾನಕ್ಕೆ ಒಂದು ವಾರವಷ್ಟೆ ಬಾಕಿ ಇರುವಾಗ ಸ್ವತಃ ಪ್ರಧಾನಿಯೇ ಸಾರ್ವಜನಿಕ ಸಭೆಯಲ್ಲಿ ಜೋರಾಗಿ ಎತ್ತುವುದು ಬೇರೆಯದೇ ಸಂಶಯ ಹುಟ್ಟಿಸುತ್ತದೆ.
ಪ್ರತಿಪಕ್ಷಗಳ ನೇತಾರರಲ್ಲಿ ಯಾವೊಬ್ಬನೂ ಹೇಳದಿರುವ ಮಾತನ್ನು ಮೋದಿಯವರು ಯಾಕೆ ಅವರ ಬಾಯಿಯಲ್ಲಿ ಹಾಕುವ ಪ್ರಯತ್ನ ಮಾಡಿದರು? ಅಷ್ಟೊಂದು ಉನ್ನತ ಸಂವಿಧಾನಿಕ ಹುದ್ದೆಯಲ್ಲಿ ಇರುವ ಮೋದಿಯವರು ಒಬ್ಬ ಅರೆಸಾಕ್ಷರ ಪಡ್ಡೆ ಹುಡುಗನಂತೆ ಇಷ್ಟೊಂದು ಉಡಾಫೆಯಿಂದ ಮಾತನಾಡಿದ್ದು ಆಗ ಎಲ್ಲರಿಗೂ ಆಘಾತ ಉಂಟು ಮಾಡಿತ್ತು.
ಗುಜರಾತಿನಲ್ಲಿ ಫಲಿತಾಂಶ ಬಂದ ಮೇಲೆ ಇತರ ವಿಪಕ್ಷಗಳು ಇವಿಎಂ ತಿರುಚುವಿಕೆ ಬಗ್ಗೆ ಆರೋಪ ಮಾಡಿದ್ದರೂ ಕಾಂಗ್ರೆಸ್ಸ್ ಮಾತ್ರ ಎಂದೂ ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಚುನಾವಣಾ ಆಯೋಗ ವಿವಿಪ್ಯಾಟ್ ಎಣಿಸಲು ನಿರಾಕರಿಸಿದ್ದರಿಂದ ನಿರ್ವಾಹವಿಲ್ಲದ ಇತರ ವಿಪಕ್ಷಗಳೂ ಸುಮ್ಮನಾಗಿದ್ದವು. ಹಾಗಾಗಿ ಕರ್ನಾಟಕದಲ್ಲಿ ಪ್ರಧಾನಿ ತನ್ನ ಚುನಾವಣಾ ಪ್ರಚಾರದಲ್ಲಿ ಇವಿಎಂ ಹ್ಯಾಕ್ ಬಗ್ಗೆ ಅಧಿಕೃತವಾಗಿ ಉಲ್ಲೇಖಿಸುವ ಅಗತ್ಯವೇ ಇಲ್ಲದಿರುವಾಗ ಮೋದಿಯವರು ಈ ಚರ್ಚಾಸ್ಪದ ವಿಷಯವನ್ನು ಸ್ವತಃ ತಾನೇ ಕೆದುಕಿದ್ದು ಯಾಕೆ?
ಕಾಂಗ್ರೆಸ್ಸ್ ತಮ್ಮ ಸೋಲನ್ನು ಇವಿಎಂ ತಿರುಚುವಿಕೆಗೆ ಆರೋಪಿಸುತ್ತದೆ ಎಂದು ಪ್ರಧಾನಿಗಳು ಉಹಾತ್ಮಕವಾಗಿ ಹೇಳಿ ತನ್ನ ಪಕ್ಷ ನಿಜವಾಗಿ ನಡೆಸಲಿರುವ ಇವಿಎಂ ತಿರುಚಾಟಕ್ಕೆ ಜನರ ಮನದಲ್ಲಿ “ನಿರೀಕ್ಷಣಾ ಜಾಮೀನು” ಪಡೆಯಲು ಚುನಾವಣೆಗೆ ಮುಂಚೆಯೇ ಪ್ರಯತ್ನಿಸಿದ್ದರೇ? ಜನರು ಕುಂಬಳ ಕಾಯಿ ಕಳ್ಳ ಅನ್ನುವ ಮೊದಲೇ ಮೇ 5 ರಂದು ಮಂಗಳೂರಿನಲ್ಲಿ ಸ್ವತಃ ಪ್ರಧಾನಿಯೇ ಹೆಗಲು ಮುಟ್ಟಿ ನೋಡಿಕೊಂಡಿದ್ದರ ಅರ್ಥವೇನು?
ಕರಾವಳಿಯ 19 ಸ್ಥಾನಗಳಲ್ಲಿ ಇವಿಎಂ ಹ್ಯಾಕ್ ಮಾಡುವ ಕರಾಳ ಯೋಜನೆ ಮೊದಲೇ ತಯಾರಾಗಿದ್ದರಿಂದ ಪ್ರಧಾನಿಗಳ ಮನಸ್ಸಿನ ಅಂತರಾಳದಲ್ಲಿ ಮನೆ ಮಾಡಿದ್ದ ಗುಟ್ಟು ಮಾತಿನ ಭರದಲ್ಲಿ ಆ ದಿನ ಹೊರಬಂದಿತ್ತೇ? ಅಪರಾಧಿಗಳು ನಿರೀಕ್ಷಣಾ ಜಾಮೀನು ಪಡೆಯುವ ವಿಧಾನದಂತೆ ಮೋದಿಯ ಈ ಮಾತೂ ಆಗಿತ್ತೇ?
ಮನಶಾಸ್ತ್ರಜ್ನರು ಹೇಳುವಂತೆ ಮನುಷ್ಯನ ಅಂತರಾತ್ಮದಲ್ಲಿ ಚುಚ್ಚುತ್ತಿರುವ ಕೆಲವು ಗಹನ ವಿಷಯಗಳು ಹಲವಾರು ಬಾರಿ ಅರಿವಿಲ್ಲದೆ ಬಾಯಿಂದ ಉದುರಿ ಬಿಡುತ್ತವೆ. ಪೊಲೀಸರಿಗೆ ತರಬೇತಿ ಶಿಬಿರದಲ್ಲಿ ಕಲಿಸುವ ಕ್ರಿಮಿನಲ್ ಸೈಕಾಲಾಜಿ ಎಂಬ ವಿಷಯದಲ್ಲಿ ಮೊಟ್ಟ ಮೊದಲು ಕಲಿಸುವ ಪಾಠವೇನೆಂದರೆ ನಿಜವಾದ ಕಳ್ಳ ಅಥವಾ ಕೊಲೆಗಾರನೇ ಪೊಲೀಸರ ಎದುರಲ್ಲಿ ಯಾವಾಗಲೂ ಅತ್ಯಂತ ಸಭ್ಯನಂತೆ, ಅತ್ಯಂತ ಕಾಳಜಿ ಉಳ್ಳವನಂತೆ ಹಾಗೂ ಅತಿ ಹೆಚ್ಚು ದುಖಿತನಾದವನಂತೆ ಬಹಿರಂಗವಾಗಿ ನಟಿಸುವುದು.
ಮೋದಿಯವರೂ ಈ ಕ್ರಿಮಿನಾಲಾಜಿಯಲ್ಲಿ ಹೇಳಿರುವಂತೆ ಚುನಾವಣೆಗೆ ಮುಂಚೆಯೇ ಯಾರೂ ಮಾಡದಿದ್ದ ಆರೋಪವನ್ನು ಕಾಲ್ಪನಿಕವಾಗಿ ತನ್ನ ಮೇಲೆ ತಾನೇ ಹಾಕಿಕೊಂಡು ಅತಿ ಪ್ರಾಮಾಣಿಕನಂತೆ ನಟಿಸಿದ್ದು ಎಂಬ ಶಂಕೆಗೆ ಇಂಬು ಕೊಡುತ್ತದೆ. ಈ ವಿಷಯ ಕರ್ನಾಟಕದಲ್ಲಿ ಅವರು ಮಾಡಿದ 21 ರ್ಯಾಲಿಯಲ್ಲಿ ಬೇರೆ ಎಲ್ಲಿಯೂ ಪ್ರಸ್ತಾಪ ಮಾಡದೇ ಕೇವಲ ಮಂಗಳೂರಲ್ಲಿ ಮಾತ್ರ ಅವರು ಪ್ರಸ್ತಾಪ ಮಾಡಿದ್ದು ನೋಡಿದರೆ ಕರಾವಳಿಯಲ್ಲಿ ಅವರ ಪಾರ್ಟಿಯವರು ಇವಿಎಂ ಹ್ಯಾಕ್ ಮಾಡುವ ತಯಾರಿ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಅವರಿಗೆ ಮೊದಲೇ ಇತ್ತು ಎಂಬುದಕ್ಕೆ ಸಾಕ್ಷಿ. ಹಾಗಾಗಿ ಮೋದಿಯವರ ಸೈಕಾಲಾಜಿ ಬಿಂಬಿಸಿರುವಂತೆ ಮಂಗಳೂರು ಸಹಿತ ದಕ್ಷಿಣ ಕನ್ನಡದ ಕೆಲವು ಕ್ಷೇತ್ರಗಳಲ್ಲಿ ಇವಿಎಂ ಹ್ಯಾಕ್ ಆಗಿರುವುದು ಖಚಿತ.
ತಮ್ಮ ವಿಶ್ವಾಸಿ,
ರಾಮಕೃಷ್ಣ ಕುಲಾಲ್.