ಸ್ಕಾರ್ಫ್ ಕಡ್ಡಾಯ ವಿರೋಧಿಸಿ ಇರಾನ್ ಚೆಸ್ ಟೂರ್ನಿಯಿಂದ ಹಿಂದೆ ಸರಿದ ಭಾರತೀಯ ಚೆಸ್ ಪಟು

ಇರಾನ್‌ನಲ್ಲಿ ಜುಲೈ 26ರಿಂದ ನಡೆಯಲಿರುವ ಏಷ್ಯನ್ ನೇಶನ್ಸ್ ಕಪ್ ಚೆಸ್

Indian chess star Soumya Swaminthan has withdrawn herself from a tournament in Iran, opposing the country’s rule which makes it mandatory for female athletes to wear a headscarf.

ನವದೆಹಲಿ: ಮಹಿಳಾ ಆಟಗಾರರಿಗೆ ಶಿರವಸ್ತ್ರ (ಸ್ಕಾರ್ಫ್) ಧರಿಸುವುದನ್ನು ಕಡ್ಡಾಯ ಮಾಡಿರುವ ಇರಾನ್ ಸರ್ಕಾರದ ಕಾನೂನು ವಿರೋಧಿಸಿ ಭಾರತೀಯ ಚೆಸ್ ಪಟು ಸೌಮ್ಯ ಸ್ವಾಮಿನಾಥನ್ ಚೆಸ್ ಪಂದ್ಯಾಟದಿಂದ ಹಿಂದೆ ಸರಿದಿದ್ದಾರೆ.

ಇರಾನ್‌ನಲ್ಲಿ ಜುಲೈ 26ರಿಂದ ಆಗಸ್ಟ್ 4ರ ವರೆಗೆ ನಡೆಯಲಿರುವ ಏಷ್ಯನ್ ನೇಶನ್ಸ್ ಕಪ್ ಚೆಸ್ ಚಾಂಪಿಯನ್‌ಶಿಪ್‌ ನಡೆಯಲಿದ್ದು ಸೌಮ್ಯ ಸ್ವಾಮಿನಾಥನ್ ಈ ಚೆಸ್ ಚೆಸ್ ಚಾಂಪಿಯನ್‌ಶಿಪ್‌‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿನಿಸಲಿದ್ದರು. ಆದರೆ ಮಹಿಳಾ ಅತ್ಲೀಟ್‌ಗಳಿಗೆ ಇರಾನ್‌ನಲ್ಲಿ ಸ್ಕಾರ್ಫ್ ಧರಿಸುವುದು ಕಡ್ಡಾಯವಾಗಿರುವ ಕಾರಣ ತಾನು ಈ ಪಂದ್ಯಾಟದಲ್ಲಿ ಭಾಗವಹಿಸಲಾರೆ ಎಂದು ಸೌಮ್ಯ ಸ್ವಾಮಿನಾಥನ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ನಾನು ಶಿರವಸ್ತ್ರ ಅಥವಾ ಬುರ್ಖಾ ಧರಿಸಬೇಕೆಂಬ ಕಾನೂನನ್ನು ನನ್ನ ಮೇಲೆ ಹೇರುವುದನ್ನು ಒಪ್ಪಲಾರೆ. ಇರಾನ್ ಸರ್ಕಾರವು ಮಹಿಳಾ ಅತ್ಲೀಟ್‌ಗಳು ಶಿರವಸ್ತ್ರ ಕಡ್ಡಾಯವಾಗಿ ಧರಿಸಬೇಕೆಂಬ ಕಾನೂನು ಮಾಡಿರುವುದು ನನ್ನ ಮೂಲಭೂತ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಅದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನನ್ನ ಧಾರ್ಮಿಕ ಸ್ವಾತಂತ್ರ್ಯವನ್ನೂ ಉಲ್ಲಂಘಿಸುತ್ತದೆ. ನನ್ನ ಆತ್ಮಸಾಕ್ಷಿ ಮತ್ತು ನನ್ನ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ನಾನು ಇರಾನ್‌ಗೆ ಚೆಸ್ ಆಡಲು ಹೋಗುತ್ತಿಲ್ಲ” ಎಂದು ಸೌಮ್ಯ ಸ್ವಾಮಿನಾಥನ್ ಹೇಳಿಕೊಂಡಿದ್ದಾರೆ.

“ಕ್ರೀಡೆಯಲ್ಲಿ ಧಾರ್ಮಿಕ ಉಡುಪು ಸಂಹಿತೆ ಹೇರಿಕೆ ಸರಿಯಲ್ಲ. ಚಾಂಪಿಯನ್‍ಶಿಪ್‌ಗಳನ್ನು ಸಂಘಟಿಸುವಾಗ ಕ್ರೀಡಾಳುಗಳ ಹಕ್ಕು ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡದಿರುವುದು ಬೇಸರದ ಸಂಗತಿ. ಕ್ರೀಡಾಕೂಟಗಳಲ್ಲಿ ನನ್ನ ರಾಷ್ಟ್ರೀಯ ತಂಡದ ಉಡುಪು, ಫಾರ್ಮಲ್ಸ್ ಅಥವಾ ಸ್ಪೋರ್ಟ್‌ವೇರ್‌ಗಳನ್ನು ಧರಿಸುವುದು ಕಡ್ಡಾಯ ನಿಜ, ಆದರೆ ಧಾರ್ಮಿಕ ಉಡುಪನ್ನು ಕ್ರೀಡೆಯಲ್ಲಿ ಕಡ್ಡಾಯ ಮಾಡುವುದನ್ನು ಒಪ್ಪಲಾಗದು” ಎಂದು ಸೌಮ್ಯ ಸ್ವಾಮಿನಾಥನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

2016ರಲ್ಲಿ ಶೂಟರ್ ಹೀನಾ ಸಿಧು ಕೂಡ ಇದೇ ಕಾರಣಕ್ಕಾಗಿ ಇರಾನ್‌ನಲ್ಲಿ ನಡೆದ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು.

Get real time updates directly on you device, subscribe now.