ಲೆಜೆಂಡ್ಸ್ ಆಫ್ ಚೆಸ್ ಟೂರ್ನಿ: ವಿಶ್ವನಾಥನ್ ಆನಂದ್‌ಗೆ ಸತತ ಮೂರನೇ ಸೋಲು
ಆನಂದ್ ಮೊದಲ ಎರಡು ಪಂದ್ಯಗಳಲ್ಲಿ ಪೀಟರ್ ಸ್ವಿಡ್ಲರ್ ಹಾಗೂ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಸೋತಿದ್ದರು.
ಕರಾವಳಿ ಕರ್ನಾಟಕ ವರದಿ
ಚೆನ್ನೈ: ಲೆಜೆಂಡ್ಸ್ ಆಫ್ ಚೆಸ್ ಆನ್‌ಲೈನ್ ಟೂರ್ನಿಯಲ್ಲಿ ವಿಶ್ವ ವಿಖ್ಯಾತ ಆಟಗಾರ, ಭಾರತದ ವಿಶ್ವನಾಥನ್ ಆನಂದ್ ಅವರು ಸತತ ಮೂರನೇ ಸೋಲು ಕಂಡಿದ್ದಾರೆ. ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ 0.5-2.5ಯಿಂದ ಅವರು ರಷ್ಯಾದ ವ್ಲಡಿಮಿರ್ ಕ್ರಮ್ನಿಕ್ ಎದುರು ಸೋತಿದ್ದಾರೆ.
ಆನಂದ್ ಮೊದಲ ಎರಡು ಪಂದ್ಯಗಳಲ್ಲಿ ಪೀಟರ್ ಸ್ವಿಡ್ಲರ್ ಹಾಗೂ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಸೋತಿದ್ದರು.
ಮೂರು ಗೆಲುವು ಸಾಧಿಸಿದ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಕಾರ್ಲ್‌ಸನ್ ಬಳಿ ಒಂಬತ್ತು ಪಾಯಿಂಟ್‌ಗಳಿವೆ. ಅವರು ಪಾಯಿಂಟ್ಸ್ ಪಟ್ಟಿಯಲ್ಲಿ ಪೀಟರ್ ಸ್ವಿಡ್ಲರ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಚೀನಾದ ದಿಂಗ್ ಲಿರೇನ್ ಅವರು 1.5-0.5ರಿಂದ ಉಕ್ರೇನ್‌ನ ವಾಸಿಲ್ ಇವಾನ್ಚುಕ್ ಎದುರು ಸೋತಿದ್ದಾರೆ.
ವಿಶ್ವನಾಥನ್ ಆನಂದ್ ಅವರು ಮ್ಯಾಗ್ನಸ್ ಕಾರ್ಲ್‌ಸನ್ ಚೆಸ್ ಟೂರ್‌ನಲ್ಲಿ ಮೊದಲ ಬಾರಿ ಆಡುತ್ತಿದ್ದು, ಇಂದು(ಶುಕ್ರವಾರ) ರಾತ್ರಿ ಮುಂದಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ಆಟಗಾರ ಅನೀಶ್ ಗಿರಿ ಮುಖಾಮುಖಿಯಾಗಲಿದ್ದಾರೆ.