ಕಲೆಗೆ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ: ಡಾಲಿ ಧನಂಜಯ್. ಕಾರ್ಟೂನು ಹಬ್ಬ ಅದ್ದೂರಿ ಉದ್ಘಾಟನೆ
ಪ್ರೀತಿಯಿಂದ ಬದುಕಲಾಗದಿದ್ದರೆ ಮನುಷ್ಯ ಸಂಕುಲಕ್ಕೆ ಭವಿಷ್ಯವಿಲ್ಲ
ಕುಂದಾಪುರದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಮತ್ತು ಬಳಗ ಆಯೋಜಿಸಿರುವ ಮೂರು ದಿನಗಳ ಕಾರ್ಟೂನು ಹಬ್ಬ
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಕಲೆ ಜನರ ಬದುಕಿನ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಕಲೆ ಜನರನ್ನು ಒಗ್ಗೂಡಿಸುತ್ತದೆ. ಕಾರ್ಟೂನುಗಳಿಗೆ ಜನರನ್ನ ಬದುಕನ್ನು ರೂಪಿಸುವ, ಚಳವಳಿಗಳನ್ನು ಕಟ್ಟುವಷ್ಟು ಶಕ್ತಿ ಇದೆ ಎಂದು ಕನ್ನಡ ಚಿತ್ರನಟ ‘ಡಾಲಿ’ ಧನಂಜಯ್ ಅಭಿಪ್ರಾಯಪಟ್ಟಿದ್ದಾರೆ. ಕುಂದಾಪುರದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಮತ್ತು ಬಳಗ ಆಯೋಜಿಸಿರುವ ಮೂರು ದಿನಗಳ ಕಾರ್ಟೂನು ಹಬ್ಬವನ್ನು ಉದ್ಘಾಟಿಸಿ ಧನಂಜಯ್ ಮಾತನಾಡಿದರು.
ಪೇಯಿಂಟರ್‌ಗಳು, ಕಾರ್ಟೂನಿಸ್ಟ್‌ಗಳು ಸಿನೆಮಾ ಕಲಾವಿದರಂತಲ್ಲ. ಸಿನೆಮಾ ಕಟ್ಟಲು ನಿರ್ದೇಶಕ, ಬರಹಗಾರ ಹೀಗೆ ದೊಡ್ಡ ತಂಡ ಬೇಕು. ಆದರೆ ಕಾರ್ಟೂನ್‌ಗಳು ವ್ಯಂಗ್ಯಚಿತ್ರಕಾರರ ಸ್ವತಂತ್ರ ಅಭಿವ್ತ್ಯಕ್ತಿಗಳು. ಇಂತಹ ಕಾರ್ಟೂನ್‌ಗಳು, ಕೃತಿಗಳೊಂದಿಗೆ ಜನರು ಬೆರೆತಾಗ ಒಡೆದ ಮನಸುಗಳು ಒಂದಾಗುತ್ತವೆ, ಜನರನ್ನು ಕೂಡಿಸುವ ಕೆಲಸಗಳು ಆಗುತ್ತವೆ ಎಂದು ಧನಂಜಯ್ ಹೇಳಿದರು.
ಪ್ರೀತಿಯಿಂದ ಬದುಕಲಾಗದಿದ್ದರೆ ಮನುಷ್ಯ ಸಂಕುಲಕ್ಕೆ ಭವಿಷ್ಯವಿಲ್ಲ
ಜಗತ್ತು ಇಂದು ಹಳ್ಳಿಯ ಬದುಕಿಗೆ ಹೊರಳಬೇಕಾಗಿದೆ. ಕನೆಕ್ಟೆಡ್ ಆಗಿರುವ ಕಾರಣ ಜಗತ್ತೇ ಈಗ ಒಂದು ಹಳ್ಳಿಯಾಗಿದೆ. ಎಲ್ಲೆಡೆ ಎಲ್ಲ ಭಾಷೆಗಳ, ಜಾತಿಯ, ಧರ್ಮದ, ವಿವಿಧ ದೇಶಗಳ ಜನ ನೆಲೆಸಿದ್ದಾರೆ. ಎಲ್ಲರೂ ಒಬ್ಬರನ್ನೊಬ್ಬರು, ಗೌರವಿಸಿಕೊಂಡು, ಪ್ರೀತಿಸಿ ಬದುಕಿದರೆ ಜಗತ್ತೇ ಚೆನ್ನಾಗಿರುತ್ತದೆ. ಇಲ್ಲವಾದರೆ ಮನುಷ್ಯ ಸಂಕುಲಕ್ಕೆ ಭವಿಷ್ಯವಿಲ್ಲ ಎಂದು ಧನಂಜಯ್ ಈ ಸಂದರ್ಭದಲ್ಲಿ ಹೇಳಿದರು.
ನೊಂದ ಜೀವ ತಬ್ಬಿಕೊಳ್ಳುವುದು ದೊಡ್ಡ ಕೊಡುಗೆ
ಸರ್ಕಾರಗಳ ಕಡೆಯಿಂದ ಇಲ್ಲದವರಿಗೆ, ಬಡವರಿಗೆ ನೆರವಾಗುವ ಕೆಲಸಗಳು ಆದಾಗ ನಾವೆಲ್ಲ ಅದನ್ನು ಪ್ರೀತಿಯಿಂದ ಸ್ವಾಗತಿಸಬೇಕು. ಸರ್ಕಾರ ರೈತರಿಗೆ ಸಾಲ ನೀಡುವುದನ್ನು, ಹಸಿದವರಿಗೆ ಕಡಿಮೆ ದರದಲ್ಲಿ ಅನ್ನ ನೀಡುವುದನ್ನು ವಿರೋಧಿಸುವ ಕಾರ್ಪೊರೇಟ್ ದುಡಿಯುವ ವರ್ಗ ತಾವು, ತಮ್ಮ ತಂದೆ ತಾತಂದಿರು ಹಿಂದೆ ಹೇಗೆ ಬಡತನದಲ್ಲಿ ಬದುಕು ಸಾಗಿಸಿದ್ದರು, ಆಗ ಸರ್ಕಾರಗಳು ಕೊಟ್ಟ ನೆರವನ್ನು ಹೇಗೆಲ್ಲ ಬಳಸಿಕೊಂಡೆವು ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಇಲ್ಲದವರಿಗೆ ಕೊಡುವಾಗ ಖುಷಿಯಿಂದ ಕೊಡಬೇಕು. ಇನ್ನೊಬ್ಬರಿಗೆ ನೆರವಾಗುವುದೇ ದೊಡ್ಡ ಫಿಲಾಸಫಿ ಎಂದ ಧನಂಜಯ್ ನೊಂದವರನ್ನು ಅಪ್ಪಿಕೊಳ್ಳುವುದೂ ಸಹ ನಾವು ಆತನಿಗೆ ನೀಡುವ ದೊಡ್ಡ ಕಾಣಿಕೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕಲಾವಿದ ಬಾದಲ್ ನಂಜುಂಡಸ್ವಾಮಿ, ಹಿರಿಯ ನ್ಯಾಯವಾದಿ ಎಎಸ್ಎಸ್ ಹೆಬ್ಬಾರ್, ಕಾಂಗ್ರೆಸ್ ಮುಖಂಡ ಮತ್ತು ಚಿಂತಕ ಸುಧೀರ್ ಕುಮಾರ್ ಮರೋಳಿ, ಕಲಾಕ್ಷೇತ್ರ ಕುಂದಾಪುರದ ಸಂಚಾಲಕ ಕಿಶೋರ್ ಕುಮಾರ್ ಮಾತನಾಡಿದರು. ಬಾದಲ್ ನಂಜುಡ್ ಸ್ವಾಮಿ ದಿವಗಂತ ನಟ ಪುನೀತ್ ರಾಜ್‌ಕುಮಾರ್ ಅವರ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ನಡುವೆ ಸಂಸದ ಶಶಿ ತರೂರ್ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರು ಭಾರತದ ಮುಂದಿನ 75 ವರ್ಷಗಳು ಹೇಗಿರಬೇಕು ಎಂಬ ಕುರಿತು ವೀಡಿಯೊ ಸಂದೇಶಗಳನ್ನು ನೀಡಿದರು. ಉಪನ್ಯಾಸಕ ಪ್ರದೀಪ ಕೆಂಚನೂರು ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳ ಕಾಲ ನಡೆಯುವ ಕಾರ್ಟೂನು ಹಬ್ಬದಲ್ಲಿ ರಾಜ್ಯದ ವಿವಿಧ ಕಾರ್ಟೂನಿಸ್ಟ್‌ಗಳ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಪುನೀತ್ ರಾಜಕುಮಾರ್‌ಗೆ ಕಾರ್ಟೂನ್‌ಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ. ವಿವಿಧ ಸ್ಪರ್ಧೆಗಳು, ಗೋಷ್ಟಿಗಳು ಆಯೋಜಿಸಲಾಗಿದೆ.
ಈ ಹಿಂದಿನ ಕಾರ್ಟೂನು ಹಬ್ಬಗಳು ಕುಂದಾಪುರದ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ನಡೆಯುತ್ತಿದ್ದು ಈ ಬಾರಿ ಕೋವಿಡ್ ನಿಯಮಗಳ ಕಾರಣ ಪಾರಿಜಾತ ಹೊಟೇಲಿನ ಎದುರು ಅಥರ್ವ ಹಾಲ್‌ನಲ್ಲಿ ನಡೆಯುತ್ತಿದೆ (ಕೋಸ್ಟಲ್ ಚಿಕನ್ ಮಳಿಗೆಯ ಮೇಲ್ಭಾಗ). ಸ್ಥಳ ಬದಲಾದರೂ ಕಾರ್ಟೂನು ಪ್ರಿಯರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಟೂನು ಹಬ್ಬಕ್ಕೆ ಹಾಜರಾಗುತ್ತಿದ್ದು ಇನ್ನೆರಡು ದಿನಗಳ ಕಾಲ ಹಬ್ಬ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಾಗವಹಿಸಿದ್ದ ಕುಂದಾಪುರದ ಆತೋ ರಿಕ್ಷಾ ಚಾಲಕರು ಧನಂಜಯ್ ಅವರ ಮುಂದಿನ ಚಿತ್ರ ‘ಬಡವ ರಾಸ್ಕಲ್’ ಚಿತ್ರಕ್ಕೆ ವಿಶಿಷ್ಟವಾಗಿ ಶುಭಕೋರಿದರು.